ಹೊಸದಿಲ್ಲಿ: ವಿಶ್ವದಾದ್ಯಂತ ಮಾರಣಾಂತಿಕವಾಗಿ ಕಾಡುತ್ತಿರುವ ಕ್ಯಾನ್ಸರ್ ರೋಗ ಹರಡುವಿಕೆಯನ್ನು ತಡೆಗಟ್ಟಲು ಅಮೆರಿಕ ಮೂಲದ ಪ್ರಸಿದ್ಧ ಔಷಧ ತಯಾರಿಕಾ ಸಂಸ್ಥೆಗಳಾದ ಮಾಡೆರ್ನಾ (Moderna) ಹಾಗೂ ಮೆರ್ಕ್ (Merck) ಸಿದ್ಧಪಡಿಸಿರುವ ನೂತನ ಲಸಿಕೆಯು ಅಂತಿಮ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಇದರೊಂದಿಗೆ ಚರ್ಮದ ಕ್ಯಾನ್ಸರ್ (Melanoma) ಕೋಶಗಳು ಮರುಕಳಿಸುವುದನ್ನು ಮತ್ತು ಹರಡುವುದನ್ನು ತಡೆಯಲು ಈ ಲಸಿಕೆ ಹೊಸ ಭರವಸೆ ಮೂಡಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
1,137 ರೋಗಿಗಳ ಮೇಲೆ ಯಶಸ್ವಿ ಪರೀಕ್ಷೆ
ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 1,137 ರೋಗಿಗಳನ್ನು ಒಳಪಡಿಸಿ ಈ ಲಸಿಕೆಯ ಅಂತಿಮ ಹಂತದ ಪರೀಕ್ಷೆ ನಡೆಸಲಾಗಿದ್ದು, ಅತ್ಯಂತ ಆಶಾದಾಯಕ ಫಲಿತಾಂಶ ದೊರೆತಿದೆ. ಮೆರ್ಕ್ ಕಂಪನಿಯ ರೋಗನಿರೋಧಕ ಶಕ್ತಿ ಹೆಚ್ಚಿಸುವ 'ಕೀಟ್ರೂಡಾ' (Keytruda) ಎಂಬ ಔಷಧಿಯೊಂದಿಗೆ ಈ ಲಸಿಕೆಯನ್ನು ಬೆರೆಸಿ ರೋಗಿಗಳಿಗೆ ನೀಡಲಾಗಿದ್ದು, ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಮತ್ತೆ ಬೆಳೆಯುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದೆ ಎಂದು ಸಂಸ್ಥೆ ತಿಳಿಸಿದೆ.
ಹೇಗೆ ಕೆಲಸ ಮಾಡುತ್ತದೆ ಈ mRNA ಲಸಿಕೆ?
- ವೈಯಕ್ತೀಕರಿಸಿದ ಲಸಿಕೆ (Personalized Vaccine): ಈ ಲಸಿಕೆಯನ್ನು ಆರ್ಎನ್ಎ (mRNA) ತಂತ್ರಜ್ಞಾನದ ಆಧಾರದಲ್ಲಿ, ಪ್ರತಿಯೊಬ್ಬ ರೋಗಿಯ ಟ್ಯೂಮರ್‌ನ (ಗಡ್ಡೆ) ಆನುವಂಶಿಕ ರಚನೆಯನ್ನು ಆಧರಿಸಿ ಪ್ರತ್ಯೇಕವಾಗಿ ತಯಾರಿಸಲಾಗುತ್ತದೆ.
- ಕ್ಯಾನ್ಸರ್ ಕೋಶಗಳ ಮೇಲೆ ದಾಳಿ: ಇದು ರೋಗಿಯ ದೇಹದ ರೋಗನಿರೋಧಕ ಶಕ್ತಿಯನ್ನು (ಇಮ್ಯೂನಿಟಿ) ಉದ್ದೀಪನಗೊಳಿಸಿ, ಕ್ಯಾನ್ಸರ್ ಕೋಶಗಳನ್ನು ನಿಖರವಾಗಿ ಗುರುತಿಸಿ ನಾಶಪಡಿಸಲು ನೆರವಾಗುತ್ತದೆ.
ಸದ್ಯ ಚರ್ಮದ ಕ್ಯಾನ್ಸರ್‌ಗಾಗಿ ಈ ಲಸಿಕೆಯನ್ನು ಯಶಸ್ವಿಯಾಗಿ ಸಿದ್ಧಪಡಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇತರ ಗಂಭೀರ ಸ್ವರೂಪದ ಕ್ಯಾನ್ಸರ್‌ಗಳ ಚಿಕಿತ್ಸೆಗೂ ಈ ತಂತ್ರಜ್ಞಾನವನ್ನು ವಿಸ್ತರಿಸಿ ಲಸಿಕೆ ಅಭಿವೃದ್ಧಿಪಡಿಸಲಾಗುವುದು ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
