ಎಫ್‌ಬಿ ಸ್ನೇಹಿತೆ ಮೇಲೆ ಅತ್ಯಾಚಾರ - ಆರೋಪಿ ಅರೆಸ್ಟ್, ಆರೋಪಿ ತಂದೆ ಮೇಲೂ ಎಫ್ಐಆರ್
Sunday, August 31, 2025
ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯಗೊಂಡ ಯುವತಿ ಮೇಲೆ ಅತ್ಯಾಚಾರ ಮಾಡಿದಲ್ಲದೆ, ಆಕೆಯ ಖಾಸಗಿ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರನಗರ ನಿವಾಸಿ ನಿರಂಜನ್(30) ಬಂಧಿತ ಆರೋಪಿ.
ಸುಬ್ರಹ್ಮಣ್ಯನಗರ ನಿವಾಸಿ 24ವರ್ಷದ ಯುವತಿ ನೀಡಿರುವ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ ನಿರಂಜನ್ ತಂದೆ ರಾಜಶೇಖರ್ ವಿರುದ್ಧವೂ ಇದೇ ಯುವತಿ ನೀಡಿರುವ ದೂರಿನನ್ವಯ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಫೇಸ್‌ಬುಕ್‌ನಲ್ಲಿ ಕೆಲ ವರ್ಷಗಳ ಹಿಂದೆ ಯುವತಿಯನ್ನು ಪರಿಚಯ ಮಾಡಿಕೊಂಡು ಆತ್ಮೀಯತೆ ಬೆಳೆಸಿದ್ದ ನಿರಂಜನ್. ಕ್ರಮೇಣ ಆಕೆಯ ಖಾಸಗಿ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ಕಳೆದ ಎಪ್ರಿಲ್‌ನಿಂದ ಆಗಸ್ಟ್ 20ರ ನಡುವೆ ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡಿ 2-3 ಬಾರಿ ಅತ್ಯಾಚಾರ ಎಸಗಿದ್ದಾನೆ.
ಅಲ್ಲದೆ, ಆಕೆಯ ದ್ವಿಚಕ್ರ ವಾಹನಕ್ಕೆ ಜಿಪಿಎಸ್ ಅಳವಡಿಸಿ ಆಕೆಯ ಚಲನವಲನಗಳ ಮೇಲೆ ನಿಗಾವಹಿಸಿದ್ದ. ಈ ವಿಚಾರ ತಿಳಿದ ಆಕೆ ಈ ಹಿಂದೆಯೇ ನಿರಂಜನ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆಗ ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಠಾಣೆಯಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಕ್ಷಮೆ ಕೇಳಿದ್ದ. ಕೆಲ ದಿನಗಳ ಬಳಿಕ ಮತ್ತೆ ಆರೋಪಿ ವೀಡಿಯೋ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಪುತ್ರ ನಿರಂಜನ್‌ನ ಮೊಬೈಲ್‌ನಲ್ಲಿದ್ದ ಸಂತ್ರಸ್ತೆಯ ಅಶ್ಲೀಲ ವಿಡಿಯೋಗಳನ್ನು ಗಮನಿಸಿದ್ದ ಆತನ ತಂದೆ ರಾಜಶೇಖರ್, ಯುವತಿಗೆ ಕರೆ ಮಾಡಿ, ನಿನ್ನ ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ತನ್ನ ಬಳಿಯಿದೆ. ತನ್ನೊಂದಿಗೂ ದೈಹಿಕ ಸಂಬಂಧ ಹೊಂದಬೇಕು. ಜತೆಗೆ ತಾನು ಹೇಳಿದವರೊಂದಿಗೂ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ರಾಜಶೇಖರ್ ಸದ್ಯ ನಾಪತ್ತೆಯಾಗಿದ್ದು, ಶೋಧ ನಡೆಯುತ್ತಿದೆ. ಆರೋಪಿ ರಾಜಶೇಖರ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದು, ನಿರಂಜನ್ ಯಾವುದೇ ಕೆಲಸಕ್ಕೆ ಹೋಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.