ಮಂಗಳೂರು: ಹೊಂಡಕ್ಕೆ ಬಿದ್ದ ಸ್ಕೂಟರ್- ಬಸ್ ಚಾಲಕನ ಸಮಯಪ್ರಜ್ಞೆಯಿಂದ ಸವಾರ ಸ್ವಲ್ಪದರಲ್ಲೇ ಪಾರು
Sunday, August 31, 2025
ಮಂಗಳೂರು: ನಗರದ ನಂತೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ಒಂದು ಹೊಂಡಕ್ಕೆ ಬಿದ್ದಿದ್ದು, ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರ ಹಿಂಭಾಗದಲ್ಲಿ ಬರುತ್ತಿದ್ದ ಬಸ್‌ನಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾದ ಘಟನೆಯ ವೀಡಿಯೋ ವೈರಲ್ ಆಗಿದೆ.
ಈ ಘಟನೆ ಶನಿವಾರ ರಾತ್ರಿ 8.45ರ ಸುಮಾರಿಗೆ ನಡೆದಿದೆ. ನಗರದ ಎನ್ಎಚ್ 66ರ ಕೆಪಿಟಿಯಿಂದ ನಂತೂರು ಕಡೆಗೆ ಸಾಗುತ್ತಿದ್ದ ಸ್ಕೂಟರ್ ಸವಾರ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಲೆತ್ನಿಸಿದ್ದಾನೆ. ಈ ವೇಳೆ ವಾಹನದ ಟಯರ್ ರಸ್ತೆ ಹೊಂಡಕ್ಕೆ ಬಿದ್ದ ಪರಿಣಾಮ ಸ್ಕೂಟರ್ ಸಹಿತ ಸವಾರ ರಸ್ತೆಗೆಸೆಯಲ್ಪಟ್ಟಿದ್ದಾನೆ.
ಈ ವೇಳೆ ಅಲ್ಲಿಯೇ ಬರುತ್ತಿದ್ದ 15ನಂಬರ್‌ನ ಖಾಸಗಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಸ್ಕೂಟರ್ ಸವಾರ ಬಸ್‌ನಡಿಗೆ ಬೀಳುವುದರಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ರಸ್ತೆ ಹೊಂಡಗುಂಡಿಗಳಿಂದ ಅದೆಷ್ಟೋ ಜೀವ ಹಾನಿಯಾಗುತ್ತಿದೆ. ಆದರೆ ಎನ್ಎಚ್ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳುವುದೇ ಇಲ್ಲ. ಇನ್ನೆಷ್ಟು ಜೀವ ಬಲಿಯಾದ ಬಳಿಕ ಅಧಿಕಾರಿಗಳು ಹೊಂಡ ಮುಚ್ಚುತ್ತಾರೋ ಕಾದು ನೋಡಬೇಕಿದೆ.