ಮುಂಬೈ: ಉದ್ಯಮಿಗೆ 60ಕೋಟಿ ರೂ. ಪಂಗನಾಮ- ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪರಾರಿ- ಲುಕ್ ಔಟ್ ನೊಟೀಸ್ ಜಾರಿಗೊಳಿಸಿದ ಪೊಲೀಸ್
Saturday, September 6, 2025
ಮುಂಬೈ: ಉದ್ಯಮಿಯೋರ್ವರಿಗೆ 60 ಕೋಟಿ ರೂ. ವಂಚನೆಗೈದಿರುವ ಆರೋಪದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಲು ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಹಣ ಹೂಡಿಕೆ ಮಾಡಿದ್ದರು. ಈ ಸಂಬಂಧ ಉದ್ಯಮಿ ದೀಪಕ್ ಕೊಠಾರಿ ಎಂಬವರಿಗೆ 60ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧ ದಳ ಮುಂಬೈ ಪೊಲೀಸರಿಗೆ ಸೂಚನೆ ನೀಡಿದ್ದು, ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ಮನೆಯಲ್ಲಿ ಇಲ್ಲದ ಕಾರಣ ಹಾಗೂ ಆಗಾಗ್ಗೆ ಈ ಇಬ್ಬರು ವಿದೇಶ ಪ್ರವಾಸ ಕೈಗೊಳ್ಳುವ ಹಿನ್ನೆಲೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿ ದೀಪಕ್ ಕೋಠಾರಿ ಎಂಬವರು 2015 ಮತ್ತು 2023ರ ಅವಧಿಯಲ್ಲಿ ಇವರು ತನ್ನಿಂದ 60 ಕೋಟಿ ರೂ ಹಣ ಪಡೆದುಕೊಂಡಿದ್ದಾರೆ. ನಾನು ನೀಡಿದ್ದ ಹಣವನ್ನು ವೈಯಕ್ತಿಕ ಬಳಕೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ದಂಪತಿ ಹಣವನ್ನು ಆರಂಭದಲ್ಲಿ ಸಾಲ ಎಂದು ಪಡೆದಿದ್ದರು. ನಂತರ ಹೂಡಿಕೆ ಎಂದು ಟ್ಯಾಕ್ಸ್ ಸೇವಿಂಗ್ಸ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಉದ್ಯಮಿ ಕೋಠಾರಿ ಪ್ರಕಾರ, ಶಿಲ್ಪಾ ಶೆಟ್ಟಿ ದಂಪತಿ ಪಡೆದಿದ್ದ ಹಣವನ್ನು ಶೇಕಡಾ 12 ರಷ್ಟು ಬಡ್ಡಿಯೊಂದಿಗೆ ನಿರ್ದಿಷ್ಟ ಅವಧಿಗೆ ಹಿಂತಿರುಗಿಸಬೇಕಾಗಿತ್ತು. 2016ರಲ್ಲಿ ಈ ಬಗ್ಗೆ ಆ ದಂಪತಿ ಲಿಖಿತ ಪತ್ರದ ಮೂಲಕ ಭರವಸೆ ಕೂಡ ನೀಡಿತ್ತು. ಆದರೆ ಹಣ ಪಡೆದು ವಾಪಸ್ ನೀಡಲೇ ಇಲ್ಲ ಎಂದು ಆರೋಪಿಸಿದ್ದಾರೆ.
ಲುಕ್ ಔಟ್ ಸರ್ಕ್ಯುಲರ್ ಎನ್ನುವುದು ಸಾಮಾನ್ಯವಾಗಿ ವಲಸೆ ಮತ್ತು ಗಡಿ ನಿಯಂತ್ರಣ ಬಿಂದುಗಳಿಗೆ ಎಚ್ಚರಿಕೆ ನೀಡುವ ಮೂಲಕ ಒಬ್ಬ ವ್ಯಕ್ತಿ ದೇಶವನ್ನು ತೊರೆಯುವುದನ್ನು ತಡೆಯಲು ಅಥವಾ ಅವರ ಚಲನವಲನಗಳನ್ನು ಪತ್ತೆಹಚ್ಚಲು ಬಳಸುವ ಒಂದು ಕಾರ್ಯವಿಧಾನವಾಗಿದೆ.