-->
ಮಂಗಳೂರು: ಪತ್ನಿಯ ಅಶ್ಲೀಲ ವೀಡಿಯೋ ಪತಿಗೆ ತೋರಿಸಿದ ಸಹ ಕಾರ್ಮಿಕನ ಕೊಲೆಗೈದು ಮೃತದೇಹ ಎಸ್‌ಟಿಪಿಯೊಳಗೆ ಬಚ್ಚಿಟ್ಟ ಆರೋಪಿ ಅರೆಸ್ಟ್‌

ಮಂಗಳೂರು: ಪತ್ನಿಯ ಅಶ್ಲೀಲ ವೀಡಿಯೋ ಪತಿಗೆ ತೋರಿಸಿದ ಸಹ ಕಾರ್ಮಿಕನ ಕೊಲೆಗೈದು ಮೃತದೇಹ ಎಸ್‌ಟಿಪಿಯೊಳಗೆ ಬಚ್ಚಿಟ್ಟ ಆರೋಪಿ ಅರೆಸ್ಟ್‌




ಮಂಗಳೂರು: ಪತ್ನಿಯ ಅಶ್ಲೀಲ ವೀಡಿಯೋವನ್ನು ಮೊಬೈಲ್‌ನಲ್ಲಿ ಶೇಖರಿಸಿಟ್ಟುಕೊಂಡು ತೋರಿಸಿದ ಸಹ ಕಾರ್ಮಿಕನನ್ನು ಕಬ್ಬಿಣದ ರಾಡ್‌ನಲ್ಲಿ ಹೊಡೆದು ಕೊಲೆಗೈದು ಮೃತದೇಹವನ್ನು ಎಸ್‌ಟಿಪಿ ಟ್ಯಾಂಕ್‌ನೊಳಗೆ ಹಾಕಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದ ಮಾಲ್ಡಾ ಜಿಲ್ಲೆ ಬಾದೋ ಗ್ರಾಮ ನಿವಾಸಿ ಲಕ್ಷ್ಮಣ್ ಮಂಡಲ್ ಅಲಿಯಾಸ್ ಲಖನ್(30) ಬಂಧಿತ ಆರೋಪಿ. ಮುಖೇಶ್ ಮಂಡಲ್(27) ಕೊಲೆಯಾದವನು.

ಜೂನ್ 24ರಂದು ನಗರದ ಸುರತ್ಕಲ್‌ನ ಮುಕ್ಕದಲ್ಲಿ ಖಾಸಗಿ ಲೇಔಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮುಖೇಶ್ ಮಂಡಲ್ ಎಂಬಾತ ನಾಪತ್ತೆ ಆಗಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಆತನ ಮೃತದೇಹ‌ ಕೊಳೆತ ಸ್ಥಿತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಲೇಔಟ್‌ನೊಳಗಡೆ ಇರುವ ಎಸ್‌ಟಿಪಿ ಟ್ಯಾಂಕ್‌ನೊಳಗೆ ಆಗಸ್ಟ್ 21ರಂದು ಬೆಳಗ್ಗೆ ಪತ್ತೆಯಾಗಿತ್ತು. 


ಈ ಬಗ್ಗೆ ಚೇತನ್ ಎಂಬಾತ ಮೃತ ಮುಖೇಶ್ ಮಂಡಲ್‌ನನ್ನು ಆತನೊಂದಿಗೆ ಕೆಲಸ‌ ಮಾಡುತ್ತಿದ್ದ ಲಕ್ಷ್ಮಣ್ ಮಂಡಲ್ ಕೊಲೆಗೈದು ಮೃತದೇಹವನ್ನು ಎಸ್‌ಟಿಪಿ ಟ್ಯಾಂಕ್‌ನೊಳಗಡೆ ಹಾಕಿ ಟ್ಯಾಂಕ್ ನ ಮುಚ್ಚಳವನ್ನು ಪ್ಲೈವುಡ್ ಶೀಟ್ ಹಾಕಿ ಮುಚ್ಚಿದ್ದಾನೆ ಎಂದು ದೂರು ನೀಡಿದ್ದರು‌. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಅ.ಕ್ರ: 109/2025 ಕಲಂ 103 (1), 238 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಕೊಲೆಗೈದ ಬಳಿಕ ತಲೆಮರೆಸಿಕೊಂಡಿದ್ದ ಲಕ್ಷ್ಮಣ್ ಮಂಡಲ್ ಪತ್ತೆಗೆ ಸುರತ್ಕಲ್ ಠಾಣಾ ಪಿಎಸ್ಐ ಶಶಿಧರ ಶೆಟ್ಟಿ ಹಾಗೂ ಎಎಸ್ಐ ರಾಜೇಶ್ ಆಳ್ವ  ತಂಡ ರಚಿಸಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಿಕೊಟ್ಟಿದ್ದರು. ಅದರಂತೆ ತಂಡವು ಲಕ್ಷ್ಮಣ್ ಮಂಡಲ್‌ನನ್ನು ಬಂಧಿಸಿ ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದೆ. ತಾನೇ ಮುಖೇಶ್‌ನನ್ನು ಕೊಲೆಗೈದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಲಕ್ಷ್ಮಣ್ ಮಂಡಲ್ ಮತ್ತು ಮುಖೇಶ್ ಮಂಡಲ್ ಜೂನ್ 24ರಂದು ರಾತ್ರಿ 9ಗಂಟೆಗೆ ಮುಕ್ಕದ ಖಾಸಗಿ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದೊಳಗೆ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಮುಖೇಶ್ ಮಂಡಲ್ ಆರೋಪಿ ಲಕ್ಷ್ಮಣ್ ಮಂಡಲ್‌ನ ಪತ್ನಿಯ ಅಶ್ಲೀಲ ವೀಡಿಯೋಗಳನ್ನು ಸಂಗ್ರಹಿಸಿ ಮೊಬೈಲ್ ನಲ್ಲಿ ಇಟ್ಟು ತೋರಿಸಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಲಕ್ಷ್ಮಣ್ ಮಂಡಲ್ ಕಬ್ಬಿಣದ ರಾಡ್‌ನಲ್ಲಿ ಮುಖೇಶ್ ಮಂಡಲ್‌ನ ತಲೆಗೆ ಹೊಡೆದು ಕೊಲೆಗೈದಿದ್ದಾನೆ. ಬಳಿಕ ಕೊಲೆಯನ್ನು ಮರೆ ಮಾಚಲು ಮೃತದೇಹವನ್ನು ಅಲ್ಲೆ ಇದ್ದ ಎಸ್‌ಟಿಪಿ ಟ್ಯಾಂಕ್‌ನೊಳಗೆ ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಅದರಂತೆ ಪೊಲೀಸರು ಆರೋಪಿ ಲಕ್ಷ್ಮಣ್ ಮಂಡಲ್‌ನನ್ನು ಬಂಧಿಸಿ ದಸ್ತಗಿರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ.

ಆರೋಪಿ ಲಕ್ಷ್ಮಣ್ ಮಂಡಲ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯದ ರತುವಾ ಪೊಲೀಸ್ ಠಾಣೆಗಳಲ್ಲಿ 2 ಹಲ್ಲೆ ಪ್ರಕರಣಗಳು ದಾಖಲಾಗಿದೆ.

Ads on article

Advertise in articles 1

advertising articles 2

Advertise under the article