ಪುತ್ತೂರು: ಯುವತಿಯನ್ನು ಗರ್ಭಿಣಿಯನ್ನಾಗಿಸಿ ವಂಚನೆಗೈದ ಪ್ರಕರಣ- ಆರೋಪಿ ಶ್ರೀಕೃಷ್ಣ ಜೆ.ರಾವ್‌ಗೆ ಹೈಕೋರ್ಟ್ ಜಾಮೀನು
Friday, September 5, 2025
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಮಾಡಿ ಸಹಪಾಠಿ ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿ ಮಾಡಿ ಮಗುವಿನ ಜನನಕ್ಕೆ ಕಾರಣನಾದ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ಪುತ್ರ ಶ್ರೀಕೃಷ್ಣ ಜೆ.ರಾವ್‌ಗೆ ಹೈಕೋರ್ಟ್ ಜಾಮೀನು ನೀಡಿದೆ.
ಆರೋಪಿಗೆ ಕರ್ನಾಟಕ ಹೈಕೋರ್ಟ್ ಸೆ.3ರಂದು ಜಾಮೀನು ಮಂಜೂರು ಮಾಡಿತ್ತು. ಬಳಿಕ ಪುತ್ತೂರು ನ್ಯಾಯಾಲಯದಲ್ಲಿ ಜಾಮೀನಿಗೆ ಸಂಬಂಧಿಸಿದ ಭದ್ರತೆ ಮತ್ತಿತರ ಪ್ರಕ್ರಿಯೆಗಳನ್ನು ಸೆ.4ರಂದು ಮುಗಿಸಲಾಗಿದೆ. ಸದ್ಯ ಮಂಗಳೂರು ಜೈಲಿನಲ್ಲಿರುವ ಆರೋಪಿಯನ್ನು ಬಿಡುಗಡೆಗೊಳಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಆರೋಪಿ ಪರ ಹೈಕೋರ್ಟ್‌ನಲ್ಲಿ ಖ್ಯಾತ ನ್ಯಾಯವಾದಿ ಪಿ.ಪಿ.ಹೆಗ್ಡೆ ವಾದಿಸಿದ್ದರು. ಪುತ್ತೂರು ನ್ಯಾಯಾಲಯದಲ್ಲಿ ಸುರೇಶ್ ರೈ ಪಡ್ಡಂಬೈಲು, ರಾಘವ ಪಿ ಮತ್ತು ದೀಪಕ್ ರೈ ವಾದಿಸಿದ್ದರು.