ಮಂಗಳೂರು: ದೇಶದ ವಿವಿಧ ವಿಮಾನ ನಿಲ್ದಾಣಗಳ ಟರ್ಮಿನಲ್ ಕಟ್ಟಡ ಸ್ಪೋಟಿಸುವ ಬೆದರಿಕೆ ಕರೆ- ಆರೋಪಿ ತಮಿಳುನಾಡಿನಲ್ಲಿ ಅರೆಸ್ಟ್
Sunday, September 7, 2025
ಮಂಗಳೂರು: ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಕರೆ ಮಾಡಿ ಟರ್ಮಿನಲ್ ಕಟ್ಟಡವನ್ನು ಸ್ಪೋಟಿಸುವ ಬೆದರಿಕೆಯೊಡ್ಡುತ್ತಿದ್ದ ಕೃತ್ಯದ ಬೆನ್ನು ಬಿದ್ದ ಮಂಗಳೂರು ಪೊಲೀಸರು ತಮಿಳುನಾಡು ರಾಜ್ಯದ ಆರೋಪಿಯನ್ನು ಹೆಡೆಮುರಿಕಟ್ಟಿ ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದಾರೆ.
ತಮಿಳುನಾಡು ರಾಜ್ಯದ ವೆಲ್ಲೂರು ಜಿಲ್ಲೆಯ ನಿವಾಸಿ ಸಸಿಕುಮಾರ್ (38) ಬಂಧಿತ ಆರೋಪಿ.
ಆಗಸ್ಟ್ 29ರಂದು ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನಾಮಧೇಯ ವ್ಯಕ್ತಿಯೋರ್ವನು ಫೋನ್ ಕರೆ ಮಾಡಿ ಟರ್ಮಿನಲ್ ಬಿಲ್ಡಿಂಗ್ ಅನ್ನು ಈಗಲೇ ಖಾಲಿ ಮಾಡಬೇಕು. ಇಲ್ಲವಾದಲ್ಲಿ ಟರ್ಮಿನಲ್ ಬಿಲ್ಡಿಂಗ್ ಅನ್ನು ಸ್ಪೋಟಿಸುವುದಾಗಿ ಬೆದರಿಕೆ ಒಡ್ಡಿದ್ದನು. ಈ ಬಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡ್ಯೂಟಿ ಟರ್ಮಿನಲ್ ಮ್ಯಾನೇಜರ್ ಬಜ್ಪೆ ಪೊಲೀಸ್ ಠಾಣೆಗೆ ನೀಡಿದ್ದರು.
ಈ ದೂರಿನ ಆಧಾರದಲ್ಲಿ ಮೊ.ನಂ 156/2025 ಕಲಂ:- 351(2), 351(3) BNS U/s:- 3(1)d Suppression of unlawful acts against safety of civil aviation act 1982 ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಬಗ್ಗೆ ಬೆನ್ನು ಬಿದ್ದ ಪೊಲೀಸರು ತನಿಖೆ ನಡೆಸಿ ಬೆದರಿಕೆ ಕರೆ ಮಾಡಿರುವ ಆರೋಪಿ ಸಸಿಕುಮಾರ್‌ನನನ್ನು ತಮಿಳುನಾಡು ರಾಜ್ಯದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆರೋಪಿ ಕರೆ ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ ದೇಶದ ವಿವಿಧ ವಿಮಾನ ನಿಲ್ದಾಣಗಳ ಮೊಬೈಲ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕಿ ಆತ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದ ಎಂದು ತಿಳಿದು ಬಂದಿದೆ. ಅದೇ ಮಾದರಿಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕರೆ ಮಾಡಿ ಟರ್ಮಿನಲ್ ಬಿಲ್ಡಿಂಗ್ ಅನ್ನು ಖಾಲಿ ಮಾಡಲು ತಿಳಿಸಿದ್ದಾನೆ. ಇಲ್ಲದಿದ್ದಲ್ಲಿ ಟರ್ಮಿನಲ್ ಬಿಲ್ಡಿಂಗ್ ಅನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಆತ ತಿಳಿಸಿರುತ್ತಾನೆ.
ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿರುತ್ತಾನೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.