ಬಂಟ್ವಾಳ / ಪುಂಜಾಲಕಟ್ಟೆ:
ಮನೆಯಲ್ಲಿ ಒಬ್ಬಂಟಿಯಾಗಿದ್ದ 82 ವರ್ಷದ ವೃದ್ಧೆಯ ಮುಖಕ್ಕೆ ಬಟ್ಟೆ ಕಟ್ಟಿ, ಕೈಯಲ್ಲಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಗಳನ್ನು ಬಲಾತ್ಕಾರವಾಗಿ ಎಳೆದು ಸುಲಿಗೆ ಮಾಡಿದ್ದ ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸರು ಭೇದಿಸಿದ್ದು, ಕೃತ್ಯವೆಸಗಿದ ವೃದ್ಧೆಯ ಸ್ವಂತ ಮೊಮ್ಮಗನನ್ನೇ ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ತೆಂಕಕಜೆಕಾರು ನಿವಾಸಿ ಶಬೀರ್ (33) ಬಂಧಿತ ಆರೋಪಿ.
ಘಟನೆಯ ವಿವರ:
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತೆಂಕಕಜೆಕಾರು ಉದ್ದದ ಗುಡ್ಡೆ ಎಂಬಲ್ಲಿ ಪಿರ್ಯಾದಿದಾರರಾದ ಸಾದಿಕ್ ಎಂಬವರ ತಾಯಿ ಅವ್ವಮ್ಮ (82) ಅವರು ಆಗಸ್ಟ್ 14ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಈ ವೇಳೆ ಮುಖಚಹರೆ ಕಾಣದಂತೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮನೆಯೊಳಗೆ ನುಗ್ಗಿದ ದುಷ್ಕರ್ಮಿ, ವೃದ್ಧೆಯ ಎರಡು ಕೈಯಲ್ಲಿದ್ದ ಸುಮಾರು 5,00,000/- ರೂ. ಮೌಲ್ಯದ 40 ಗ್ರಾಂ ತೂಕದ 2 ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದ. ಈ ವೇಳೆ ವೃದ್ಧೆಯ ಕೈಗೆ ಗಂಭೀರ ರಕ್ತಗಾಯವಾಗಿತ್ತು.
ಈ ಕುರಿತು ಸಾದಿಕ್ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 70/2026, ಕಲಂ: 309(6) BNS-2023 ರಂತೆ ಸುಲಿಗೆ ಪ್ರಕರಣ ದಾಖಲಾಗಿತ್ತು.
ಖಾಕಿ ಬಲೆಗೆ ಬಿದ್ದ ಸ್ವಂತ ಮೊಮ್ಮಗ:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ, ಆಗಸ್ಟ್ 16ರಂದು ಆರೋಪಿ ಹಾಗೂ ವೃದ್ಧೆ ಅವ್ವಮ್ಮ ಅವರ ಸ್ವಂತ ಮೊಮ್ಮಗನಾದ ಶಬೀರ್ (33) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಲಿಗೆ ಮಾಡಲಾಗಿದ್ದ 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಪತ್ತೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ:
ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕರಾದ (DYSP) ಶ್ರೀಮತಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ, ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ ರವಿ ಬಿ.ಎಸ್, ಪುಂಜಾಲಕಟ್ಟೆ ಠಾಣಾ ಪಿ.ಎಸ್.ಐ ರಾಜೇಶ್ ಕೆ.ವಿ, ಸಿಬ್ಬಂದಿಗಳಾದ ಎಎಸ್‌ಐ ಬೆನ್ನಿಚ್ಚನ್, ಪ್ರವೀಣ್ ಮೂರುಗೋಳಿ, ರಾಜೇಶ್, ವಿಜಯ್ ಕುಮಾರ್, ರಾಹುಲ್ ರಾವ್, ನಾಗರಾಜ್, ರಜಿತ್, ಬಸವರಾಜ್, ಸತೀಶ್ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಅವರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
