ಬೆಂಗಳೂರು: ನೊಂದ ಅಪ್ರಾಪ್ತೆ (ಸಂತ್ರಸ್ತೆ) ಬೇರೊಬ್ಬ ವ್ಯಕ್ತಿಯನ್ನು ವಿವಾಹವಾಗಿದ್ದಾರೆ ಎಂಬ ಕಾರಣವನ್ನು ಮುಂದುಮಾಡಿ, ಆರೋಪಿಯ ಮೇಲಿರುವ ಪೋಕ್ಸೋ (POCSO) ಕಾಯ್ದೆಯಡಿಯ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ಇತರ ಸಹ-ಆರೋಪಿಗಳು ಖುಲಾಸೆಯಾಗಿದ್ದಾರೆ ಮತ್ತು ಸಂತ್ರಸ್ತೆಗೆ ಈಗ ಮದುವೆಯಾಗಿದೆ ಎಂದು ಹೇಳಿ, ದೇವನಹಳ್ಳಿ ತಾಲೂಕಿನ ನಿವಾಸಿ ಪಾಲಾಕ್ಷ ಕುಮಾರ್ ಎಂಬುವರು ತಮ್ಮ ಮೇಲಿನ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ.
ಕೋರ್ಟ್‌ನಲ್ಲಿ ನಡೆದಿದ್ದೇನು?
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರನ ವಾದವನ್ನು ನ್ಯಾಯಪೀಠ ತಳ್ಳಿಹಾಕಿತು. "ಈ ಪ್ರಕರಣದಲ್ಲಿ ನೀವು ಮೊದಲನೇ ಪ್ರಮುಖ ಆರೋಪಿಯಾಗಿದ್ದೀರಿ. ಬೇರೆ ಆರೋಪಿಗಳು ಖುಲಾಸೆಗೊಂಡಿದ್ದಾರೆ ಎಂದ ಮಾತ್ರಕ್ಕೆ ಅದೇ ನಿಯಮ ನಿಮಗೂ ಅನ್ವಯಿಸುತ್ತದೆ ಎಂದು ಭಾವಿಸುವುದು ತಪ್ಪು" ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಆರೋಪಿ ಪರ ವಕೀಲರು, "ಸಂತ್ರಸ್ತೆಯು ಸಂಧಾನದ ಮೂಲಕ ಪ್ರಕರಣವನ್ನು ಪರಸ್ಪರ ಬಗೆಹರಿಸಿಕೊಳ್ಳಲು ಸಿದ್ಧರಿದ್ದಾರೆ" ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಯತ್ನಿಸಿದರು.
ಹೈಕೋರ್ಟ್ ಆಕ್ಷೇಪ ಮತ್ತು ಖಡಕ್ ನುಡಿಗಳು:
ಅರ್ಜಿದಾರರ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿತು:
ಬೇರೆಯವರನ್ನು ಮದುವೆಯಾದರೆ ಅಪರಾಧ ಮುಚ್ಚಿಹೋಗಲ್ಲ:
ಸಂತ್ರಸ್ತೆ ಮದುವೆಯಾಗಿರುವುದು ಅರ್ಜಿದಾರನನ್ನಲ್ಲ, ಬೇರೊಬ್ಬರನ್ನು. ಅವಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ ಎಂಬ ಕಾರಣಕ್ಕೆ ಆರೋಪಿ ಮಾಡಿರುವ ಕೃತ್ಯ ಅಥವಾ ಅಪರಾಧದ ಕಲೆ ಅಳಿಸಿಹೋಗುವುದಿಲ್ಲ.
ರಾಜಿಗೆ ಅವಕಾಶವಿಲ್ಲ:ಅಪ್ರಾಪ್ತೆಯ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ಹೀಗೆ ರಾಜೀ ಸಂಧಾನದ ಮೂಲಕ ಮುಕ್ತಾಯಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
ಕೋರ್ಟ್ ಮೆಟ್ಟಿಲೇರಿ:ಅರ್ಜಿದಾರನ ಮೇಲೆ ಪೋಕ್ಸೋ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿ ಗಂಭೀರವಾದ ಲೈಂಗಿಕ ದೌರ್ಜನ್ಯದ ಆರೋಪಗಳಿವೆ. ಹೀಗಾಗಿ ಆತ ವಿಚಾರಣಾ ನ್ಯಾಯಾಲಯದ ಮುಂದೆಯೇ ವಿಚಾರಣೆಯನ್ನು ಎದುರಿಸಬೇಕು.
"ಸಂತ್ರಸ್ತೆ ಬೇರೊಬ್ಬರ ಕೈ ಹಿಡಿದಿದ್ದಾಳೆ ಎಂಬ ಕಾರಣಕ್ಕೆ ಅಪ್ರಾಪ್ತೆಯ ಮೇಲಿನ ಅತ್ಯಾಚಾರದ ಆರೋಪ ರದ್ದಾಗುವುದಿಲ್ಲ" ಎಂದು ನ್ಯಾಯಪೀಠವು ಖಡಾಖಂಡಿತವಾಗಿ ಹೇಳಿ, ಅರ್ಜಿಯನ್ನು ವಜಾಗೊಳಿಸಲು ಮುಂದಾಯಿತು.
ಅರ್ಜಿ ಹಿಂಪಡೆದ ವಕೀಲರು:
ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿ ಆದೇಶ ಪ್ರಕಟಿಸಲು ಮುಂದಾಗುತ್ತಿದ್ದಂತೆ ಎಚ್ಚೆತ್ತ ಆರೋಪಿ ಪರ ವಕೀಲರು, ತಮ್ಮ ಅರ್ಜಿಯನ್ನು ವಾಪಸ್ ಪಡೆಯಲು ಅನುಮತಿ ಕೋರಿದರು. ವಕೀಲರ ವಿನಂತಿಯನ್ನು ಪುರಸ್ಕರಿಸಿದ ಹೈಕೋರ್ಟ್, ಅರ್ಜಿ ಹಿಂಪಡೆಯಲು ಸಮ್ಮತಿಸಿ ಪ್ರಕರಣವನ್ನು ವಿಲೇವಾರಿ ಮಾಡಿತು.