National

15 ದಿನಗಳಷ್ಟೇ ಬದುಕುವ ಗಡುವು ನೀಡಿದ್ದ ವೈದ್ಯರು: ಕಣ್ಣು ಕಳೆದುಕೊಂಡರೂ ಲಂಡನ್‌ನಲ್ಲಿ ಫ್ಯಾಷನ್ ಶಿಕ್ಷಣ ಪಡೆಯುತ್ತಿರುವ ರಾಯ್‌ಪುರದ ಛಲಗಾತಿ ಆಶ್ಕಾ!





ಲಂಡನ್‌ / ರಾಯ್‌ಪುರ: "ಆಕೆಗೆ ಕಣ್ಣು ಕಾಣಿಸುವುದಿಲ್ಲ, ಅವಳ ಬದುಕು ಮುಗಿಯಿತು, ಯಾರೂ ಅವಳನ್ನು ಮದುವೆಯಾಗುವುದಿಲ್ಲ, ಆಕೆ ಕುಟುಂಬಕ್ಕೆ ಹೊರೆ..." – 11ನೇ ವಯಸ್ಸಿನಲ್ಲಿ ಜೀವನ್ಮರಣ ಹೋರಾಟ ನಡೆಸಿ ಕಣ್ಣಿನ ದೃಷ್ಟಿ ಕಳೆದುಕೊಂಡ ಬಾಲಕಿಗೆ ಸಮಾಜ ನೀಡಿದ ‘ತೀರ್ಪು’ಗಳಿವು. ಆದರೆ, ಆ ಎಲ್ಲಾ ಕಹಿ ಮಾತುಗಳನ್ನು ಮೆಟ್ಟಿ ನಿಂತ 20 ವರ್ಷದ ಆಶ್ಕಾ ಸುನಿಲ್ ಗೋಯಲ್, ಇಂದು ವಿಶ್ವದ ಪ್ರತಿಷ್ಠಿತ ಲಂಡನ್ ಕಾಲೇಜ್ ಆಫ್ ಫ್ಯಾಷನ್‌ನಲ್ಲಿ (LCF) ವಿದ್ಯಾಭ್ಯಾಸ ಪಡೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಛತ್ತೀಸ್‌ಗಢದ ರಾಯ್‌ಪುರದ ನಿವಾಸಿಯಾದ ಆಶ್ಕಾ ಗೋಯಲ್, 5ನೇ ತರಗತಿಯ ಪರೀಕ್ಷಾ ಹಾಲ್‌ನಲ್ಲಿ ರಕ್ತ ವಾಂತಿ ಮಾಡಿಕೊಂಡಾಗ ಆಕೆಯ ಬದುಕಿನ ಕರಾಳ ಅಧ್ಯಾಯ ಆರಂಭವಾಗಿತ್ತು. ಚೆನ್ನೈ ಮತ್ತು ಮುಂಬೈನ ಆಸ್ಪತ್ರೆಗಳಲ್ಲಿ ಪರೀಕ್ಷಿಸಿದಾಗ ಆಕೆಯ ಮೂಗಿನ ಹೊಳ್ಳೆಯ ಬಳಿ (Nasal cavity) ಆಪ್ಟಿಕ್ ನರಗಳನ್ನು ಒತ್ತುತ್ತಿದ್ದ ಕೊನೆಯ ಹಂತದ ಕ್ಯಾನ್ಸರ್ ಗಡ್ಡೆ (Brain Tumour) ಇರುವುದು ಪತ್ತೆಯಾಗಿತ್ತು. ವೈದ್ಯರು ಕೇವಲ 15 ದಿನಗಳ ಜೀವಿತಾವಧಿಯ ಗಡುವು ನೀಡಿ, ಆಪರೇಷನ್ ಮಾಡುವುದು ಅತ್ಯಂತ ಅಪಾಯಕಾರಿ ಎಂದಿದ್ದರು.

ಆದರೆ, ಆಕೆಯ ಕುಟುಂಬ ಧೃತಿಗೆಡದೆ ಹೋರಾಟ ನಡೆಸಿತು. ತೀವ್ರ ಕಿಮೋಥೆರಪಿ, ರೇಡಿಯೋಥೆರಪಿಯ ನೋವಿನ ನಡುವೆ ರಾಯ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಆಶ್ಕಾ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡರು. ಬಳಿಕ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಪ್ರಾಣ ಉಳಿದರೂ, ದೃಷ್ಟಿ ಮರಳಿ ಬರಲಿಲ್ಲ.

“ಕುರುಡು ಹುಡುಗಿಗೆ ಫ್ಯಾಷನ್ ಶಿಕ್ಷಣ ಸಾಧ್ಯವಿಲ್ಲ” ಎಂದಿದ್ದ ಶಿಕ್ಷಕಿಗೆ ಸಡ್ಡು!

ದೃಷ್ಟಿ ಕಳೆದುಕೊಂಡ ಬಳಿಕ ಲ್ಯಾಪ್‌ಟಾಪ್‌ನಲ್ಲಿ ಸ್ಕ್ರೀನ್ ರೀಡರ್ ಬಳಸಿ ವಿದ್ಯಾಭ್ಯಾಸ ಮುಂದುವರಿಸಿದ ಆಶ್ಕಾ, ತರಗತಿಯಲ್ಲಿ "ನಾನು ಫ್ಯಾಷನ್ ಕಲಿಯುತ್ತೇನೆ" ಎಂದಾಗ, ಶಿಕ್ಷಕಿಯೊಬ್ಬರು ಎಲ್ಲರೆದುರೇ "ನೀನು ಅಂಧೆ, ನಿನಗೆ ಫ್ಯಾಷನ್ ಕಲಿಯಲು ಸಾಧ್ಯವಿಲ್ಲ" ಎಂದು ಹೀಯಾಳಿಸಿದ್ದರು. ಅಂದು ರಾತ್ರಿ ಕಣ್ಣೀರಿಟ್ಟ ಆಶ್ಕಾ, "ಇನ್ನು ಮುಂದೆ ಎಂದಿಗೂ ಅಳುವುದಿಲ್ಲ, ಇವರೆಲ್ಲರ ಮಾತು ತಪ್ಪು ಎಂದು ಸಾಬೀತು ಮಾಡುತ್ತೇನೆ" ಎಂದು ದೃಢ ಸಂಕಲ್ಪ ಮಾಡಿದ್ದರು.

ತಮ್ಮ ಕನಸನ್ನು ನನಸು ಮಾಡಲು 11 ಮತ್ತು 12ನೇ ತರಗತಿಯ ವೇಳೆ ಮುಂಬೈಗೆ ಒಬ್ಬರೇ ತೆರಳಿ ಸ್ವತಂತ್ರ ಜೀವನ ನಡೆಸಿ, ಇಂಟರ್ನ್‌ಶಿಪ್‌ಗಳನ್ನು ಪೂರೈಸಿ ಭರ್ಜರಿ ಪೋರ್ಟ್‌ಫೋಲಿಯೊ ಸಿದ್ಧಪಡಿಸಿದರು. ಆ ಪರಿಶ್ರಮದ ಫಲವಾಗಿ ಲಂಡನ್ ಕಾಲೇಜ್ ಆಫ್ ಫ್ಯಾಷನ್‌ನಲ್ಲಿ ಬಿಎಸ್ಸಿ (ಆನರ್ಸ್) ಫ್ಯಾಷನ್ ಮ್ಯಾನೇಜ್‌ಮೆಂಟ್ ಪ್ರವೇಶ ಪಡೆದರು.

ಲಂಡನ್‌ನಲ್ಲಿ ಸ್ವತಂತ್ರ ಜೀವನ – ಡಿಜಿಟಲ್ ಜಗತ್ತಿನಲ್ಲಿ ಸ್ಫೂರ್ತಿ

ಪ್ರಸ್ತುತ ಲಂಡನ್‌ನಲ್ಲಿ ಒಬ್ಬರೇ ವಾಸಿಸುತ್ತಿರುವ ಆಶ್ಕಾ, ಸ್ವತಃ ಅಡುಗೆ ಮಾಡಿಕೊಳ್ಳುತ್ತಾ, ಊರುಗೋಲಿನ (White cane) ಸಹಾಯದಿಂದ ಓಡಾಡುತ್ತಾ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ @answersbyashka ಎಂಬ ಪ್ಲಾಟ್‌ಫಾರ್ಮ್ ಮೂಲಕ ಅಂಧರ ಸ್ವತಂತ್ರ ಬದುಕು, ಫ್ಯಾಷನ್ ಹಾಗೂ ವಿದ್ಯಾರ್ಥಿ ಜೀವನದ ಕುರಿತು ಜನಜಾಗೃತಿ ಮೂಡಿಸುತ್ತಾ ಲಕ್ಷಾಂತರ ಮಂದಿಗೆ ಪ್ರೇರಣೆಯಾಗಿದ್ದಾರೆ.

"ಲಂಡನ್‌ನಲ್ಲಿ ನಾನು ಒಬ್ಬಳೇ ಮಾಡಬಹುದಾದ ಹಲವು ಕೆಲಸಗಳನ್ನು ಭಾರತದಲ್ಲಿನ ಸೌಲಭ್ಯಗಳ ಕೊರತೆಯಿಂದಾಗಿ (Accessibility gap) ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವಿದೆ" ಎಂದು ಹೇಳುವ ಆಶ್ಕಾ, ಕಷ್ಟಗಳನ್ನು ಮೆಟ್ಟಿನಿಂತು ಸಾಧನೆ ಮಾಡಬಯಸುವ ಯುವಪೀಳಿಗೆಗೆ ದೊಡ್ಡ ಮಾದರಿಯಾಗಿದ್ದಾರೆ.



ಟ್ಯಾಗ್‌ಗಳು: National