ಸ್ವಾಗತ, | ವ್ಯಾಲಿಡಿಟಿ:

ನಿಮ್ಮ ಪೇಜ್ ಲೋಡ್ ಆಗುತ್ತಿದೆ...

ದಯವಿಟ್ಟು ಕಾಯಿರಿ

ಗಲ್ಫ್ ಕನ್ನಡಿಗ ನ್ಯೂಸ್ ಓದಿ

ಗೂಗಲ್ ಲಾಗಿನ್ ಆಗಿ 24 ಗಂಟೆಗೆ 1 ರೂಪಾಯಿ ಪಾವತಿಸಿ

CASHFREE ADMIN LOGIN

ಮಗನ ಅಪಘಾತದ ಬೆನ್ನಲ್ಲೇ ಪೊಲೀಸರಿಗೆ ಧಮಕಿ ಹಾಕಿದ ಬಿಜೆಪಿ ಶಾಸಕ ಪ್ರೀತಮ್ ಲೋಧಿ! ಕರಾಳ ಇತಿಹಾಸ ಬಿಚ್ಚಿಟ್ಟ ಅಧಿಕಾರಿಗಳು

 



ಶಿವಪುರಿ (ಮಧ್ಯಪ್ರದೇಶ): ರಸ್ತೆ ಅಪಘಾತವೊಂದನ್ನು ನೆಪವಾಗಿಟ್ಟುಕೊಂಡು ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕಿರುವ ಘಟನೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಗನ ತಪ್ಪನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಶಾಸಕ ಪ್ರೀತಮ್ ಲೋಧಿ ಪೊಲೀಸರ ವಿರುದ್ಧವೇ ಅಸಭ್ಯವಾಗಿ ವರ್ತಿಸಿದ್ದು, ಅವರ ಕ್ರಿಮಿನಲ್ ಹಿನ್ನೆಲೆ ಮತ್ತೆ ಚರ್ಚೆಗೆ ಬಂದಿದೆ.

ಘಟನೆ ಹಿನ್ನೆಲೆ: ಐವರ ಮೇಲೆ ಹರಿದ 'ಥಾರ್'

ಏಪ್ರಿಲ್ 16ರಂದು ಬೆಳಗ್ಗೆ ಶಿವಪುರಿಯ ಕರೇರಾ ಪೊಲೀಸ್ ಠಾಣೆಯ ಮುಂದೆಯೇ ಶಾಸಕ ಪ್ರೀತಮ್ ಲೋಧಿ ಮಗ ದಿನೇಶ್ ಲೋಧಿ ಅತಿ ವೇಗವಾಗಿ ಚಲಾಯಿಸುತ್ತಿದ್ದ ಥಾರ್ ಎಸ್‌ಯುವಿ ಐವರ ಮೇಲೆ ಹರಿದಿತ್ತು. ಅಪಘಾತದ ನಂತರ ಮಗ ದಿನೇಶ್ ಸ್ಥಳದಿಂದ ಓಡಿಹೋಗಿ ಸಮೀಪದ ಜಿಮ್ ಸೇರಿಕೊಂಡಿದ್ದ. ಪೊಲೀಸರು ಅಲ್ಲಿಗೆ ಹೋದಾಗ, "ನನ್ನ ತಂದೆ ಶಾಸಕರು, ಅವರು ಮರ್ಡರ್ ಕೇಸ್ ಕೂಡ ಮ್ಯಾನೇಜ್ ಮಾಡುತ್ತಾರೆ, ನಿಮ್ಮ ಸ್ಟೇಷನ್ ಇನ್-ಚಾರ್ಜ್ ಅನ್ನು ನಾನೇ ನೋಡಿಕೊಳ್ಳುತ್ತೇನೆ" ಎಂದು ಅವಾಜ್ ಹಾಕಿದ್ದ ಎನ್ನಲಾಗಿದೆ.

ಬಣ್ಣ ಬದಲಿಸಿದ ಶಾಸಕ: ಪೊಲೀಸರಿಗೆ ಓಪನ್ ಚಾಲೆಂಜ್

ಆರಂಭದಲ್ಲಿ "ಜನರೇ ನನಗೆ ಮುಖ್ಯ, ಮಗನ ಮೇಲೆ ಎಫ್‌ಐಆರ್ ದಾಖಲಿಸಿ" ಎಂದು ನಾಟಕವಾಡಿದ್ದ ಶಾಸಕ ಪ್ರೀತಮ್ ಲೋಧಿ, ಕೆಲವೇ ದಿನಗಳಲ್ಲಿ ಉಲ್ಟಾ ಹೊಡೆದಿದ್ದಾರೆ. ಐಪಿಎಸ್ ಅಧಿಕಾರಿ ಆಯುಷ್ ಜಾಖರ್ ಅವರಿಗೆ "ಕರೇರಾ ಏನಾದರೂ ನಿಮ್ಮ ಅಪ್ಪನದ್ದಾ?" ಎಂದು ಪ್ರಶ್ನಿಸಿರುವ ಲೋಧಿ, "ನಮ್ಮ ಇತಿಹಾಸ ಒಮ್ಮೆ ತಿರುಗಿ ನೋಡಿ" ಎಂದು ಬಹಿರಂಗವಾಗಿ ಧಮಕಿ ಹಾಕಿದ್ದಾರೆ.

ಶಾಸಕನ ಕರಾಳ 'ಇತಿಹಾಸ'ದಲ್ಲಿ ಏನೇನಿದೆ?

ಪೊಲೀಸರಿಗೆ ಇತಿಹಾಸ ನೋಡಲು ಹೇಳಿದ ಶಾಸಕ ಪ್ರೀತಮ್ ಲೋಧಿ ಅವರ ಚುನಾವಣಾ ಅಫಿಡವಿಟ್ ಪ್ರಕಾರವೇ ಅವರ ಮೇಲೆ ಭೀಕರ ಕೇಸ್‌ಗಳಿವೆ:

  • ಶಾಸಕನ ಮೇಲೆ ಕೊಲೆ (Section 302), ಕೊಲೆ ಯತ್ನ (Section 307) ಸೇರಿದಂತೆ ಒಟ್ಟು 28 ಸೆಕ್ಷನ್‌ಗಳ ಅಡಿಯಲ್ಲಿ 9 ಗಂಭೀರ ಕೇಸ್‌ಗಳಿವೆ.

  • 2012ರ ವೇಳೆಗೆ ಇವರ ಮೇಲೆ ಕೊಲೆ, ದರೋಡೆ ಸಂಚು, ಗಲಭೆ ಸೇರಿದಂತೆ ಬರೋಬ್ಬರಿ 34 ಪ್ರಕರಣಗಳಿದ್ದವು.

  • ಹಿಂದೆ ಗ್ವಾಲಿಯರ್‌ನ ಹಜಿರಾ ಪೊಲೀಸ್ ಚೌಕಿಗೆ ನುಗ್ಗಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ ಇವರ ಮೇಲಿದೆ.

  • ಅಂತರರಾಜ್ಯ ಅಪರಾಧಿ ಹರೇಂದ್ರ ರಾಣಾನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು.

ತಂದೆಗೆ ತಕ್ಕ ಮಗ!

ಶಾಸಕನ ಮಗ ದಿನೇಶ್ ಲೋಧಿ ಕೂಡ ಕ್ರಿಮಿನಲ್ ಚಟುವಟಿಕೆಗಳಲ್ಲಿ ಹಿಂದೆ ಬಿದ್ದಿಲ್ಲ. 2023ರಲ್ಲಿ ಬೆದರಿಕೆ ಪ್ರಕರಣ, 2024ರಲ್ಲಿ ನೆರೆಹೊರೆಯವರ ಮೇಲೆ ಗಾಡಿ ಹರಿಸಲು ಯತ್ನಿಸಿದ ಆರೋಪ ಹಾಗೂ ಕೋಟಿಗಟ್ಟಲೆ ಹಣದ ಸುಲಿಗೆ ಆರೋಪಗಳು ಈತನ ಮೇಲಿವೆ.

ರಾಜಕೀಯ ವಿವಾದಗಳು

ಉಮಾಭಾರತಿ ಅವರಿಗೆ ಆಪ್ತರಾಗಿದ್ದ ಪ್ರೀತಮ್ ಲೋಧಿ, 2022ರಲ್ಲಿ ಬ್ರಾಹ್ಮಣ ಸಮುದಾಯ ಮತ್ತು ಧಾರ್ಮಿಕ ಪ್ರಚಾರಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದರು. ಆದರೆ 2023ರ ಚುನಾವಣೆಗೂ ಮುನ್ನ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈಗ ಅಧಿಕಾರದ ಮದದಿಂದ ಪೊಲೀಸರನ್ನೇ ಬೆದರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.