ಪತ್ನಿಗೆ ಕೈಕೊಟ್ಟ ಭೂಪ ಅತ್ತೆಯನ್ನು ವಿವಾಹವಾದ Marriage




ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಎಂಬಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬನು ತನ್ನ ಪತ್ನಿಯ ತಾಯಿ ಅಂದರೆ ತನ್ನ ಅತ್ತೆಯನ್ನೇ ವಿವಾಹವಾಗಿದ್ದಾನೆ. ಸದ್ಯ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಅಳಿಯ ಮತ್ತು ಅತ್ತೆ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಇವರಿಬ್ಬರು ನ್ಯಾಯಾಲಯದಲ್ಲಿ ನೋಂದಾಯಿತ ವಿವಾಹ (ಕೋರ್ಟ್ ಮ್ಯಾರೇಜ್) ಮಾಡಿಕೊಂಡಿದ್ದಾರೆ. 

ಈ ಘಟನೆಯು ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿದ್ದು, ಕೌಟುಂಬಿಕ ಸಂಬಂಧಗಳ ಪವಿತ್ರತೆಗೆ ಧಕ್ಕೆ ತಂದಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ವಿಲಕ್ಷಣ ಕೌಟುಂಬಿಕ ಬಿಕ್ಕಟ್ಟು ಸದ್ಯ ಕಾನ್ಪುರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಾನ್ಪುರದ ಈ ನಿವಾಸಿಗೆ ಕೆಲ ವರ್ಷಗಳ ಹಿಂದೆ ಯುವತಿಯೊಬ್ಬಳೊಂದಿಗೆ ವಿವಾಹವಾಗಿತ್ತು. ಮದುವೆಯಾದ ಆರಂಭದಲ್ಲಿ ದಂಪತಿಯ ನಡುವೆ ಎಲ್ಲವೂ ಸರಿಯಾಗಿತ್ತು. ಆದರೆ, ಕಾಲಕ್ರಮೇಣ ಪತ್ನಿಯ ತಾಯಿ ತನ್ನ ಮಗಳ ಮನೆಗೆ ಆಗಾಗ ಬಂದು ಉಳಿದುಕೊಳ್ಳಲು ಆರಂಭಿಸಿದ್ದರು. ಈ ಸಮಯದಲ್ಲಿ ಅಳಿಯ ಮತ್ತು ಅತ್ತೆಯ ನಡುವೆ ಪ್ರೇಮಾಂಕುರವಾಗಿದೆ ಎನ್ನಲಾಗಿದೆ.

ಅತ್ತೆಯೊಂದಿಗಿನ ಸಂಬಂಧ ದಿನದಿಂದ ದಿನಕ್ಕೆ ಆಳವಾಗುತ್ತಿದ್ದಂತೆ, ಆತ ತನ್ನ ಪತ್ನಿಯಿಂದ ದೂರವಾಗಲು ನಿರ್ಧರಿಸಿದ್ದಾನೆ. ಕೌಟುಂಬಿಕ ಕಲಹ ಹಾಗೂ ಭಿನ್ನಾಭಿಪ್ರಾಯಗಳ ನೆಪವೊಡ್ಡಿ ಆತ ನ್ಯಾಯಾಲಯದ ಮೂಲಕ ತನ್ನ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ್ದಾನೆ. ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ, ಆತ ತನ್ನ ಮಾಜಿ ಪತ್ನಿಯ ತಾಯಿಯನ್ನೇ ಅಂದರೆ ತನ್ನ ಅತ್ತೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಇಬ್ಬರೂ ಒಮ್ಮತದಿಂದ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ವಿಚಿತ್ರವಾದ ಮದುವೆಗೆ ಕುಟುಂಬದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಫೋಟೋ ಮತ್ತು ವಿಡಿಯೋ ಎಕ್ಸ್ (ಟ್ವಿಟರ್)ನಲ್ಲಿ ವೈರಲ್ ಆಗಿದ್ದು, “ತಾಯಿಯೇ ತನ್ನ ಸ್ವಂತ ಮಗಳ ಸಂಸಾರವನ್ನು ಹೇಗೆ ಮುರಿಯಬಹುದು? ಈಕೆ ತಾಯಿ ಎಂದು ಕರೆಸಿಕೊಳ್ಳಲು ಲಾಯಕ್ಕಿಲ್ಲ” ಎಂಬ ಕ್ಯಾಪ್ಷನ್ ನೀಡಿ ಹಂಚಿಕೊಳ್ಳಲಾಗಿದೆ. ಇವರಿಬ್ಬರ ಈ ವರ್ತನೆ ಕೌಟುಂಬಿಕ ಸಂಬಂಧಗಳ ವ್ಯಾಖ್ಯಾನಕ್ಕೇ ಮಸಿ ಬಳಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಸ್ವಂತ ಮಗಳ ಸಂಸಾರವನ್ನು ಹಾಳುಗೆಡವಿ ಒಬ್ಬ ತಾಯಿಗೆ ಏನು ಸಿಗಲು ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ಮಹಿಳೆಯು ಮಗಳು ಮತ್ತು ಗಂಡನ ಮನೆಯವರನ್ನು ಧಿಕ್ಕರಿಸಿ ತನ್ನ ಅಳಿಯನೊಂದಿಗೆ ಮನೆಯಿಂದ ಓಡಿಹೋಗಿ, ನಂತರ ಕೋರ್ಟ್‌ನಲ್ಲಿ ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ.