ಮಂಗಳೂರು: ಪ್ರೀತಿಯ ನಾಟಕವಾಡಿ ಅಪ್ರಾಪ್ತೆಯ ಅತ್ಯಾಚಾರಗೈದ ಕಾಮುಕನಿಗೆ 20ವರ್ಷ ಜೈಲು
Thursday, July 31, 2025
ಮಂಗಳೂರು: 16ವರ್ಷದ ಅಪ್ರಾಪ್ತೆಯನ್ನು ವಾಟ್ಸ್ಆ್ಯಪ್ ಮೂಲಕ ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡಿ ಬಳಿಕ ಅತ್ಯಾಚಾರಗೈದು ಬೆದರಿಸಿ ವೀಡಿಯೋ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-2 (ಪೊಕ್ಸೊ) ನ್ಯಾಯಾಲಯ ಕಾಮುಕನಿಗೆ 20ವರ್ಷ ಕಾರಾಗೃಹ ಶಿಕ್ಷೆ ಹಾಗೂ 50ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಬಂಟ್ವಾಳ ತಾಲೂಕಿನ ಸಜಿಪ ನಡು ಗ್ರಾಮದ ಬಸ್ತಿ ಗುಡ್ಡೆ ನಿವಾಸಿ ಮನ್ಸೂರ್ ಅಲಿಯಾಸ್ ಮೊಹಮ್ಮದ್ ಮನ್ಸೂರ್ ಅಲಿಯಾಸ್ ಜಾಬೀರ್(30) ಶಿಕ್ಷೆಗೊಳಗಾದ ಅಪರಾಧಿ.
2023ರಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡಿದ್ದ. ಬಳಿಕ ಆಕೆಯನ್ನು ಕಾರು ಬೈಕ್‌ನಲ್ಲಿ ಸುತ್ತಾಡಿಸಿದ್ದ. 2023ರ ಮೇ 30ರಂದು ಅಪ್ರಾಪ್ತೆಯ ಮೇಲೆ ಮನ್ಸೂರ್ ಅತ್ಯಾಚಾರ ಮಾಡಿ ಬೆದರಿಸಿ ವೀಡಿಯೊ ಮಾಡಿದ್ದನು. ಸಂತ್ರಸ್ತೆ ಈ ಬಗ್ಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಿಳಾ ಠಾಣೆಯಲ್ಲಿ 2023ರ ಡಿಸೆಂಬರ್ 23ರಂದು ಪ್ರಕರಣ ದಾಖಲಾಗಿತ್ತು. ಆ ಬಳಿಕದಿಂದ ಆತ ಸುಮಾರು 8ತಿಂಗಳಿನಿಂದ ತಲೆಮರೆಸಿಕೊಂಡಿದ್ದನು. 2024ರ ಜುಲೈ 2ರಂದು ಆತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಪ್ರಕರಣ ತನಿಖೆ ಕೈಗೊಂಡ ಮಹಿಳಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಗುರುರಾಜ್ ಭಾಗಶಃ ತನಿಖೆ ಪೂರೈಸಿದ್ದರು. ಮುಂದಿನ ತನಿಖೆ ನಡೆಸಿದ ನಿರೀಕ್ಷಕ ರಾಜೆಂದ್ರ ಬಿ.ರವರು ಪೂರಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನಿಗದಿತ ಸಮಯದ ಒಳಗಾಗಿ ತನಿಖೆಯನ್ನು ಪೂರೈಸಿ ಆರೋಪಿತ ಮನ್ಸೂರ್ ವಿರುದ್ಧ ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ವಿವಾದವನ್ನು ಆಲಿಸಿ ಆರೋಪಿ ತಪ್ಪಿತಸ್ಥ ಎಂದು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-2 (ಪೊಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್.ಮಾನುರವರು ಅತ್ಯಾಚಾರಗೈದ ಅಪರಾಧಕ್ಕೆ ಮನ್ಸೂರ್‌ಗೆ 20ವರ್ಷ ಕಾರಾಗೃಹ ಶಿಕ್ಷೆ ಹಾಗೂ 50,000ರೂ. ದಂಡ ವಿಧಿಸಿದ್ದಾರೆ. ಬೆದರಿಕೆ ಹಾಕಿರುವುದಕ್ಕೆ ಕಲಂ 506 ಐ.ಪಿ.ಸಿ ಪ್ರಕರಣದ ಪ್ರಕಾರ 1ವರ್ಷ ಜೈಲು ಶಿಕ್ಷೆ ಹಾಗೂ 5000ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಸರಕಾರಿ ಅಭಿಯೋಜಕ ಬದ್ರಿನಾಥ ಮತ್ತು ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದಾರೆ.