ಸಂಘ ಅನರ್ಹ: ತಡೆಯಾಜ್ಞೆ ಇಲ್ಲದಿದ್ದರೂ ಪದಾಧಿಕಾರಿ ನೆಲೆಯಲ್ಲಿ ಕಾರ್ಯಕ್ರಮ- ಡಿಸಿ ತರಾಟೆ
ಸಂಘ ಅನರ್ಹ: ತಡೆಯಾಜ್ಞೆ ಇಲ್ಲದಿದ್ದರೂ ಪದಾಧಿಕಾರಿ ನೆಲೆಯಲ್ಲಿ ಕಾರ್ಯಕ್ರಮ- ಡಿಸಿ ತರಾಟೆ
ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಅಸಿಂಧು ಎಂದು ಮಂಗಳೂರು ಸಿವಿಲ್ ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ನೋಂದಾಯಿತ ಸಂಘ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತ್ತು.
ಆದರೆ, ಜಿಲ್ಲಾ ಸಂಘದ ಪದಾಧಿಕಾರಿಗಳು ಜಿಲ್ಲಾ ಸಂಘ ದ ಹೆಸರಿನಲ್ಲೇ ಮೇಲ್ಮನವಿ ಸಲ್ಲಿಸಿದ್ದರೂ ಆ ಮೇಲ್ಮನವಿಯನ್ನೂ ಮಂಗಳೂರಿನ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ವಿಚಾರಣಾ ನ್ಯಾಯಾಲಯ ತೀರ್ಪನ್ನು ಎತ್ತಿಹಿಡಿದು ಮೇಲ್ಮನವಿಯಲ್ಲಿ ತಿರಸ್ಕರಿಸಿದ್ದರು.
ಆ ಬಳಿಕ ಆಡಳಿತಾಧಿಕಾರಿ ನೇಮಕ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್ ಮತ್ತು ಸಕ್ಷಮ ಅಧಿಕಾರಿಗಳು ಈ ಬಗ್ಗೆ ಯಾವುದೇ ದೃಢ ಕ್ರಮಗಳನ್ನು ಕೈಗೊಂಡಿಲ್ಲ.
ಈ ಎಲ್ಲ ಅಕ್ರಮಗಳ ಮಧ್ಯೆ, ಪದಾಧಿಕಾರಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ ಕಾರ್ಯಕಾರಿ ಸಮಿತಿ ಕರೆದಿದ್ದಾರೆ ಈ ಸಭೆಯಲ್ಲಿ ಲೆಕ್ಕಪತ್ರ ಮಂಡಿಸಿ ಮಂಜೂರಾತಿ ಪಡೆದುಕೊಂಡಿದ್ದಾರೆ. ಕಾರ್ಯಕಾರಿ ಸಮಿತಿ ಸಭೆಯೇ ಅಕ್ರಮ ಎಂದಾದ ಮೇಲೆ ಆ ಲೆಕ್ಕಪತ್ರಕ್ಕೂ ಬೆಲೆ ಇಲ್ಲ ಎಂಬುದು ಕಾನೂನು ಪಂಡಿತರ ಅಭಿಪ್ರಾಯ.
ಈ ಅನರ್ಹಗೊಂಡ ಅವಧಿಯಲ್ಲಿ ಪದಾಧಿಕಾರಿಗಳು ಲಕ್ಷಾಂತರ ರೂ.ಗಳ ಕಾಮಗಾರಿ ನಡೆಸಲಾಗಿದೆ ಎಂದು ತೋರಿಸಿ ಅಕ್ರಮವಾಗಿ ಬಿಲ್ ಪಾವತಿಸಿದ್ದಾರೆ. ಈ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರವಾಗಿದೆ ಎಂಬ ಅನುಮಾನಗಳು ಎದ್ದಿವೆ.
ಅನರ್ಹಗೊಂಡ ಪದಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಕ್ಕೆ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಸೂಚಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಮೇಲಿನ ಅಧಿಕಾರಿಗಳೂ ಈ ಅಕ್ರಮ ಎಸಗಿರುವ ಪದಾಧಿಕಾರಿಗಳ ಜೊತೆಗೆ ಕೈಜೋಡಿಸಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಈ ಮಧ್ಯೆ, ಜಿಲ್ಲಾಧಿಕಾರಿ ಶ್ರೀ ಮಲೈ ಮುಹಿಲನ್ ಅವರಿಗೆ ಕೆಲ ಸರ್ಕಾರಿ ನೌಕರರು ಈ ಮಾಹಿತಿಯನ್ನು ಗಮನಕ್ಕೆ ತಂದಿದ್ದು, ಅವರು ಪದಾಧಿಕಾರಿಗಳನ್ನು ಕರೆಸಿ ತಡೆಯಾಜ್ಞೆ ಇಲ್ಲದೆ ಕಾರ್ಯಕ್ರಮ ನಡೆಸದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
Read this Also
ಸಂಘ ಅನರ್ಹಗೊಂಡರೂ ಕೋಟಿಗಟ್ಟಲೆ ವ್ಯವಹಾರ!: ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆಯ ತೂಗುಕತ್ತಿ