
ನನ್ನ ತೆರಿಗೆ ನನ್ನ ಹಕ್ಕು ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಬಲ: ಕೇಂದ್ರದ ತೆರಿಗೆ ಹಣ ತಾರತಮ್ಯದ ವಿರುದ್ಧ ದೇಶವ್ಯಾಪಿ ಆಂದೋಲನ?
ನನ್ನ ತೆರಿಗೆ ನನ್ನ ಹಕ್ಕು ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಬಲ: ಕೇಂದ್ರದ ತೆರಿಗೆ ಹಣ ತಾರತಮ್ಯದ ವಿರುದ್ಧ ದೇಶವ್ಯಾಪಿ ಆಂದೋಲನ?
ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕದಲ್ಲಿ ಅಭಿಯಾನ ಆರಂಭವಾಗಿದೆ. ನನ್ನ ತೆರಿಗೆ ನನ್ನ ಹಕ್ಕು ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಈ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ಅಭಿಯಾನ ದೇಶವ್ಯಾಪಿ ಸದ್ದು ಮಾಡುತ್ತಿದ್ದು, ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲೂ ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಇದೇ ವೇಳೆ, ರಾಜ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಹಂಚಿಕೆಯಾಗುತ್ತಿರುವ ತೆರಿಗೆ ಪಾಲಿನ ಸಮಗ್ರ ಮಾಹಿತಿ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ರಾಜ್ಯ ಕರ್ನಾಟಕವಾಗಿದೆ. ಆದರೆ, ಅದರ ತೆರಿಗೆ ಪಾಲಿಗೆ ತಕ್ಕಂತೆ ಅನುದಾನ ಸಿಗುತ್ತಿಲ್ಲ. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ.
ಈ ಅನ್ಯಾಯದ ಬಗ್ಗೆ ಮಾತನಾಡಬೇಕಿದ್ದ ಕೇಂದ್ರವನ್ನು ಎಚ್ಚರಿಸಬೇಕಾಗಿದ್ದ ರಾಜ್ಯದಿಂದ ಆಯ್ಕೆಯಾದ ಸಂಸದರು ಸಂಸತ್ತಿನಲ್ಲಿ ಈ ಬಗ್ಗೆ ತುಟಿ ಪಿಟಿಕ್ ಅನ್ನುತ್ತಿಲ್ಲ. ಭಾವನಾತ್ಮಕ ವಿಚಾರದಲ್ಲೇ ಮುಳುಗಿರುವ ಸಂಸದರನ್ನು ನಿದ್ದೆಯಿಂದ ಎಬ್ಬಿಸಲು ಜನತೆ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್‌ನಲ್ಲಿ 5300 ಕೋಟಿ ರೂಪಾಯಿ ಘೋಷಿಸಲಾಗಿತ್ತು. ಆದರೆ, ಇದುವರೆಗೂ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಆ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ರಾಜ್ಯದಿಂದಲೇ ಆಯ್ಕೆಯಾಗಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.
ಈ ಮಧ್ಯೆ, ತೆರಿಗೆ ಹಂಚಿಕೆಯಲ್ಲಿ ನ್ಯಾಯಯುತ ಪಾಲು ಕೊಡದಿದ್ದರೆ ಪ್ರತ್ಯೇಕ ರಾಷ್ಟ್ರದ ಘೋಷಣೆ ಹಾಕಿದ್ದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಮನೆಗೆ ಬಿಜೆಪಿ ಯುವ ಮೋರ್ಚಾ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿತು.