ಸಂಘ ಅನರ್ಹಗೊಂಡರೂ ಕೋಟಿಗಟ್ಟಲೆ ವ್ಯವಹಾರ! ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆಯ ತೂಗುಕತ್ತಿ...
ಸಂಘ ಅನರ್ಹಗೊಂಡರೂ ಕೋಟಿಗಟ್ಟಲೆ ವ್ಯವಹಾರ! ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆಯ ತೂಗುಕತ್ತಿ...
ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಹುದ್ದೆಯಿಂದ ಅನರ್ಹಗೊಂಡವರ ಮೇಲೆ ನ್ಯಾಯಾಂಗ ನಿಂದನೆಯ ತೂಗುಕತ್ತಿ
ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಹುದ್ದೆಗಳಿಗೆ ನಡೆದ ಚುನಾವಣೆ ಅಸಿಂಧು ಎಂಬುದಾಗಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ದಿನಾಂಕ 22.8.2022ರ ರಂದು ನೀಡಿದ ತೀರ್ಪಿನಲ್ಲಿ ಘೋಷಿಸಿತು. ನ್ಯಾಯಾಲಯದ ಈ ತೀರ್ಪಿನ ಅನ್ವಯ ತನ್ನ ಅಸ್ತಿತ್ವವನ್ನು ಕಳೆದುಕೊಂಡರೂ ಜಿಲ್ಲಾ ಸಂಘದ ಹೆಸರಿನಲ್ಲಿಯೇ ಮೇಲ್ಮನವಿಯನ್ನು ಸಲ್ಲಿಸಿದ್ದು ಸದರಿ ಮೇಲ್ಮನವಿಯನ್ನು ದಿನಾಂಕ 17.11.2023 ರಂದು ಮಂಗಳೂರಿನ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ಇತ್ಯರ್ಥಪಡಿಸಿದ್ದು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.
ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ ತಮ್ಮ ಹುದ್ದೆಗಳು ಅಸ್ತಿತ್ವವನ್ನು ಕಳೆದುಕೊಂಡಿದ್ದರೂ ತಾವೇ ಪದಾಧಿಕಾರಿಗಳು ಎಂದು ಸ್ವಯಂ ಘೋಷಿಸಿಕೊಂಡು ಅನಧಿಕೃತವಾಗಿ ದಿನಾಂಕ 30.1.2024 ಮತ್ತು 3.2.2024 ರಂದು ಕಾರ್ಯಕಾರಿ ಸಮಿತಿ ಸಭೆಯನ್ನು ಕರೆದಿದ್ದಾರೆ. ಅಕ್ರಮ ಲೆಕ್ಕ ಪತ್ರಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಅನರ್ಹಗೊಂಡ ಅವಧಿಯಲ್ಲಿ ಲಕ್ಷಾಂತರ ರೂಪಾಯಿಗಳ ಕಾಮಗಾರಿ ನಡೆಸಿ ಅಕ್ರಮವಾಗಿ ಬಿಲ್ ಪಾವತಿಸಿದ್ದಾರೆ.
ಅನರ್ಹಗೊಂಡ ಪದಾಧಿಕಾರಿಗಳು ನಡೆಸಿರುವ ಆರ್ಥಿಕ ಅವ್ಯವಹಾರವನ್ನು ಅವಗಾಹನಿಸಿದ ಮಾನ್ಯ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಕ್ಕೆ ತನ್ನ ತೀರ್ಪಿನ ಪುಟ ಸಂಖ್ಯೆ 38 ಮತ್ತು 39ರಲ್ಲಿ ನಿರ್ದೇಶಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ಮಹಾಸಭೆ ನಡೆಸದಿರುವುದು, ಏಳು ದಿನಗಳ ಮುಂಗಡ ನೋಟಿಸ್ ನೀಡದೆ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸಿರುವುದು, ತಮ್ಮ ಅವಧಿಯಲ್ಲಿ ಆರ್ಥಿಕ ಅವ್ಯವಹಾರ ನಡೆಸಿರುವುದು, ಸಂಘದ ಪದಾಧಿಕಾರಿಗಳ ಚುನಾವಣೆಯನ್ನು ಅಸಿಂಧು ಗೊಳಿಸಿದ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ದ ತೀರ್ಪನ್ನು ಹಾಗೂ ಸದರಿ ತೀರ್ಪನ್ನು ಎತ್ತಿ ಹಿಡಿದ ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ಕೂಡ ಗೌರವಿಸದಿರುವುದು, ತೆರವಾದ ಖಜಾಂಚಿ ಹುದ್ದೆಯನ್ನು ಬೈಲಾ ನಿಯಮಾನಸಾರ ಕಾರ್ಯಕಾರಿ ಸಮಿತಿಯ ನಿರ್ದೇಶಕರೊಳಗೆ ಚುನಾವಣೆ ನಡೆಸಿ ಭರ್ತಿ ಮಾಡದೆ ಅನಧಿಕೃತವಾಗಿ ಸದರಿ ಹುದ್ದೆಗೆ ನೇಮಕಾತಿ ಮಾಡಿರುವುದು, ಅನರ್ಹಗೊಂಡ ಬಳಿಕ ಲಕ್ಷಾಂತರ ರೂಪಾಯಿ ಅಕ್ರಮ ಕಾಮಗಾರಿಯ ಹೆಸರಿನಲ್ಲಿ ಅವ್ಯವಹಾರ ನಡೆಸಿರುವುದು ಇತ್ಯಾದಿ ಸಂಗತಿಗಳು ದ.ಕ. ಜಿಲ್ಲಾ ಸಂಘಕ್ಕೆ ಆಡಳಿತ ಅಧಿಕಾರಿಯನ್ನು ನೇಮಿಸಲು ಪೂರಕವಾಗಿರುವ ಅಂಶಗಳು ಆಗಿರುವುದರಿಂದ ದ.ಕ. ಜಿಲ್ಲಾ ಸಂಘಕ್ಕೆ ಆಡಳಿತ ಅಧಿಕಾರಿಗಳನ್ನು ನೇಮಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಸದರಿ ಮನವಿ ಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗಳು ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಿದರೂ ಇದುವರೆಗೂ ಸಂಘಕ್ಕೆ ಆಡಳಿತ ಅಧಿಕಾರಿಗಳ ನೇಮಕವಾಗಿಲ್ಲ.
ಈತನ್ಮಧ್ಯೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ವತಿಯಿಂದ ದಿನಾಂಕ 6.2.2024 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರಗಲಿದೆ ಎಂಬುದಾಗಿ ಆಹ್ವಾನ ಪತ್ರಿಕೆಯಲ್ಲಿ ಅನರ್ಹಗೊಂಡ ಪದಾಧಿಕಾರಿಗಳು ತಮ್ಮ ಹೆಸರುಗಳನ್ನು ಮುದ್ರಿಸಿ, ವಾರ್ತಾ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ.
ಮಾನ್ಯ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ಪಡೆದ ಬಳಿಕವೇ ಜಿಲ್ಲಾ ಸಂಘದ ಆಡಳಿತ ಮಂಡಳಿ ಮರುಅಸ್ತಿತ್ವ ವನ್ನು ಪಡೆಯುತ್ತದೆ. ಜಿಲ್ಲಾ ಸಂಘವು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದರೂ ಸಂಘದ ಹೆಸರಿನಲ್ಲಿಯೇ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಿಸಲಾಗಿದೆ. ದಿನಾಂಕ 5.2.2024 ರ ಹೈಕೋರ್ಟ್ ಜಾಲತಾಣವನ್ನು ಪರಿಶೀಲಿಸಿದಾಗ ತಡೆಯಾಜ್ಞೆ ಆದೇಶ ಕುರಿತು ಯಾವುದೇ ಮಾಹಿತಿ ಇರುವುದಿಲ್ಲ. ಸದರಿ ಮೇಲ್ಮನವಿಯ ಊರ್ಜಿತ ಬಗ್ಗೆ ವಿಚಾರಣೆ ಇನ್ನಷ್ಟೇ ನಡೆಯಬೇಕಾಗಿದೆ. ಸದರಿ ಮೇಲ್ಮನವಿಯು ಕಚೇರಿ ಆಕ್ಷೇಪಣೆಗಳನ್ನು ಪಾಲಿಸುವ ಹಂತದಲ್ಲಿದ್ದು ಮಾನ್ಯ ನ್ಯಾಯಪೀಠದ ಸಮಕ್ಷಮ ಮಂಡಿಸಲ್ಪಟ್ಟಿಲ್ಲ ಹಾಗೂ ಯಾವುದೇ ತಡೆಯಾಜ್ಞೆ ಇದುವರೆಗೂ ದೊರೆತಿಲ್ಲ.
ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ದೊರಕದೆ ಅಸ್ತಿತ್ವ ಕಳೆದುಕೊಂಡಿರುವ ಜಿಲ್ಲಾ ಸಂಘದ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಏರ್ಪಡಿಸುವುದು ನ್ಯಾಯಾಂಗ ನಿಂದನೆಯ ವ್ಯಾಪ್ತಿಗೆ ಒಳಪಡುತ್ತದೆ. ದ.ಕ. ಜಿಲ್ಲಾ ಸಂಘದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಹಾಗೂ ಸನ್ನಿವೇಶಗಳನ್ನು ಪರಿಗಣಿಸಿದಾಗ ಮಾನ್ಯ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿಯನ್ನು ನೀಡಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಸರಕಾರಿ ನೌಕರರು ಹಾಜರಾಗಲು ಅನುಮತಿ ಪತ್ರವನ್ನು ಪಡೆದಿರುವುದು ಸ್ಪಷ್ಟವಾಗುತ್ತದೆ. ಈ ರೀತಿ ತಪ್ಪು ಮಾಹಿತಿ ನೀಡಿ ಮುಜುಗರದ ಸನ್ನಿವೇಶಕ್ಕೆ ಕಾರಣಕರ್ತರಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
ಒಂದು ವೇಳೆ ಮೇಲ್ಮನವಿಯಲ್ಲಿ ಮಾನ್ಯ ಹೈಕೋರ್ಟಿನಿಂದ ತಡೆಯಾಜ್ಞೆ ದೊರಕದೇ ಇದ್ದಲ್ಲಿ ದಿನಾಂಕ 6.2.2024 ರಂದು ಜಿಲ್ಲಾ ಸಂಘದ ವತಿಯಿಂದ ಕರೆದಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಾನೂನುಬಾಹಿರವಾಗಿದ್ದು ನ್ಯಾಯಾಂಗ ನಿಂದನೆ ಮಾಡಿದಂತಾಗುತ್ತದೆ. ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾದ ಸರಕಾರಿ ನೌಕರರ ವಿರುದ್ಧ ನ್ಯಾಯಾಲಯವು ದಂಡ, ಜುಲ್ಮಾನೆ ಹಾಗೂ ಕಾರಾಗೃಹ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಸರಕಾರಿ ನೌಕರರಿಗೆ ತಕ್ಕದಲ್ಲದ ವರ್ತನೆ ತೋರಿಸಿದ್ದಕ್ಕಾಗಿ ಅವರು ಇಲಾಖಾ ಶಿಸ್ತು ಕ್ರಮಕ್ಕೆ ಗುರಿಯಾಗಿ ಅವರ ಸೇವಾ ಜೀವನಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ದಿನಾಂಕ 6.2.2024ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಸರಕಾರಿ ನೌಕರರಿಗೆ ನೀಡಿದ ಅನುಮತಿಯನ್ನು ಮರುಪರಿಶೀಲಿಸಬೇಕಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಅವರು ತಿಳಿಸಿದ್ದಾರೆ