
ಜಿಲ್ಲೆಗಳಲ್ಲಿ ಕೊರೋನಾ ಗೆದ್ದರೆ ಇಡೀ ದೇಶ ಗೆದ್ದಂತೆ: ಪ್ರಧಾನಿ ನರೇಂದ್ರ ಮೋದಿ ( video)
Tuesday, May 18, 2021
ಮಂಗಳೂರು: “ಕೊರೊನಾ ಸೋಂಕು ನಿಯಂತ್ರಣ ತರುವ ನಿಟ್ಟಿನಲ್ಲಿ ತಮ್ಮ ತಮ್ಮ ಜಿಲ್ಲೆಗಳ ಸವಾಲುಗಳೇನು ಎಂಬುದು ತಮಗೆ ಚೆನ್ನಾಗಿ ಗೊತ್ತಿರುತ್ತದೆ. ಅವುಗಳನ್ನು ಅರಿತು ಕೊರೊನಾ ಯುದ್ದದಲ್ಲಿ ಫಿಲ್ಡ್ ಕಮಾಂಡರ್‌ಗಳಾಗಿ ಫ್ರಂಟ್‌ಲೈನ್ ವಾರಿರ‍್ಸ್ಗಳು ಸೇರಿದಂತೆ ಇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಭಿನ್ನ ಯೋಜನೆ, ಆಲೋಚನೆಗಳ ಮೂಲಕ ಸೊಂಕನ್ನು ತಡೆಗಟ್ಟಿ. ತಮ್ಮ ಜಿಲ್ಲೆ ಗೆದ್ದರೇ ಇಡೀ ದೇಶವೇ ಗೆದ್ದಂತೆ…” ಎಂದು ಜಿಲ್ಲಾಧಿಕಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದರು.
ಅವರು ಇಂದು ಅತಿಹೆಚ್ಚು ಕೊರೊನಾ ಸೊಂಕಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದರು.
ಕೊರೊನಾ ಸಂದಿಗ್ಧ ಸಮಯದಲ್ಲಿ ಅತ್ಯಂತ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೀರಿ. ಬಹಳಷ್ಟು ಜನರು ತಮ್ಮ ಮನೆಗಳಿಗೆ ಹೋಗಿಲ್ಲ. ಮನೆಯ ಸದಸ್ಯರನ್ನು ಭೇಟಿಯಾಗಿಲ್ಲ. ಅನೇಕರು ಸೊಂಕಿಗೆ ತುತ್ತಾದರೂ ಗುಣಮುಖರಾಗಿ ಮತ್ತೇ ಎಂದಿನಂತೆ ಕರ್ತವ್ಯಕ್ಕೆ ಮರಳಿದ್ದೀರಿ ಎಂದು ಡಿಸಿಗಳ ಕೆಲಸವನ್ನು ಶ್ಲಾಘಿಸಿದ ಅವರು ಕೋವಿಡ್ ಮಹಾಮಾರಿ ಕಟ್ಟಿಹಾಕುವ ನಿಟ್ಟಿನಲ್ಲಿ ನಡೆಸುತ್ತಿರುವ ಈ ಹೋರಾಟದಲ್ಲಿ ನವೀನ ಆಲೋಚನೆಗಳು, ಆವಿಷ್ಕಾರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ, ತಮ್ಮ ಈ ನವೀನ ಆಲೋಚನೆಗಳು ಬೇರೆ ಜಿಲ್ಲೆಗಳಿಗೆ ಮಾದರಿಯಾಗಲಿದೆ ಮತ್ತು ಅಳವಡಿಕೆಗೆ ಸಹಕಾರಿಯಾಗುವುದರ ಜೊತೆಗೆ ಇಡೀ ದೇಶಕ್ಕೆ ಉಪಯುಕ್ತವಾಗಲಿ ಎಂದರು.
ಪಿಎಂ ಕೇರ್ಸ್ ಫಂಡ್ ನಿಧಿಯಿಂದ ದೇಶದ ಪ್ರತಿ ಜಿಲ್ಲೆಗಳಲ್ಲಿಯೂ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಶೀಘ್ರ ಸ್ಥಾಪನೆ ಮಾಡುವುದಾಗಿ ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದರು.
ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಮಾನಿಟರಿಂಗ್ ಕಮಿಟಿ ಕಾರ್ಯಾರಂಭ ಮಾಡಬೇಕು. ಲಸಿಕಾ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದ ಅವರು ಕೊರೊನಾದ ವಿರುದ್ಧದ ನಮ್ಮ ಹೋರಾಟ ಸೊಂಕು ತಡೆಗಟ್ಟುವುದರ ಜೊತೆಗೆ ಒಂದೊAದು ಅಮೂಲ್ಯ ಜೀವ ಉಳಿಸುವುದಾಗಿದೆ ಎಂದರು.
ಹಳ್ಳಿಗಳಲ್ಲಿ ನನ್ನ ಹಳ್ಳಿ ಕೊರೊನಾ ಮುಕ್ತ ಮಾಡುವೇ ಮತ್ತು ಕೊರೊನಾ ಸೊಂಕು ನನ್ನ ಗ್ರಾಮಕ್ಕೆ ಬರದಂತೆ ತಡೆಗಟ್ಟುವೆ ಎಂಬ ಪ್ರತಿಜ್ಞೆಯನ್ನು ಜನರು ತೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದ ಅವರು ಕೊರೊನಾ ಸೊಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಳೀಯ ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಿ, ಟೆಸ್ಟಿಂಗ್ ಕೂಡ ಪರಿಣಾಮಕಾರಿಯಾಗಿ ಕೈಗೊಳ್ಳಿ ಎಂದರು.
ಕೊರೊನಾ ಮುಕ್ತ ಗ್ರಾಮಕ್ಕೆ ಸಂಕಲ್ಪಿಸುವುದರ ಜೊತೆಗೆ ಲಸಿಕಾ ಅಭಿಯಾನ ಚುರುಕುಗೊಳಿಸಲು ನಿರ್ದೇಶನ ನೀಡಿದರು. ಕೋವಿಡ್ ಕುರಿತು ಗ್ರಾಮಿಣ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಬೇಕು ಮತ್ತು ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಸಹಭಾಗಿತ್ವ ಅಗತ್ಯ. ಗ್ರಾಪಂ ಸದಸ್ಯನಿಂದ ಹಿಡಿದು ಸಂಸತ್ ಸದಸ್ಯನವರೆಗೆ ಪಕ್ಷಬೇಧ ಮರೆತು ಎಲ್ಲರ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿಡಿಯೋ ಸಂವಾದದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ಹಾಣ ಸೇರಿದಂತೆ 10 ರಾಜ್ಯಗಳ ಮುಖ್ಯಮಂತ್ರಿಗಳು, ಕರ್ನಾಟಕದ 17 ಜಿಲ್ಲೆಗಳು ಸೇರಿದಂತೆ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳು,ಜಿಲ್ಲಾ ಉಸ್ತುವಾರಿ ಸಚಿವರು ಇದ್ದರು.