ಮತ್ತೆ ಫೀಲ್ಡ್ ಗಿಳಿದ ಡಾ. ಕಕ್ಕಿಲ್ಲಾಯ- ಕೊರೊನಾ ಸೋಲಿಸುವ ಅಜೆಂಡದಲ್ಲಿ ಲೈವ್ ಬರಲಿದ್ದಾರೆ ಖ್ಯಾತ ವೈದ್ಯ!
Thursday, May 20, 2021
ಮಂಗಳೂರು: ಇತ್ತೀಚೆಗೆ ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸದೇ ಶಾಪಿಂಗ್ ಮಾಡಿ, ತನ್ನ ಮೇಲೆ ಪ್ರಕರಣ ದಾಖಲಾಗಿದ್ದರೂ, ಡಾಕ್ಟರ್ ಕಕ್ಕಿಲ್ಲಾಯ ಮತ್ತೆ ಫೀಲ್ಡ್ ಗೆ ಇಳಿದಿದ್ದಾರೆ.
ವೈದ್ಯಕೀಯ ರಂಗದ ಬಂಡವಾಳಶಾಹಿ ಪ್ರವೃತ್ತಿ, ರೋಗಿಗಳನ್ನು ಸುಲಿಗೆ ಮಾಡುವುದು, ಕಮಿಷನ್ ದಂಧೆ ಮೊದಲಾದವುಗಳನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದ ಕಕ್ಕಿಲ್ಲಾಯ, ಸಾಂಕ್ರಾಮಿಕ ರೋಗಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಾ ಬಂದಿದ್ದರು.
ಹಣ ಮಾಡುವುದಕ್ಕಾಗಿ ರೋಗಿಗಳನ್ನು ಶೋಷಣೆ ಮಾಡುವುದರ ಬದ್ಧ ವೈರಿಯಾಗಿದ್ದ ಕಕ್ಕಿಲ್ಲಾಯ ಬಂಡವಾಳಶಾಹಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಇದೀಗ ಅದ್ಯಾವುದಕ್ಕೂ ಜಗ್ಗದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮತ್ತೆ ಕೊರೋನಾ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿಗೆ ಇಳಿದಿದ್ದಾರೆ.
'ಆಹಾರ ಬದಲಿಸಿ, ಕೊರೋನಾ ಸೋಲಿಸಿ' ಎಂಬ ವಿಚಾರವಾಗಿ ಕಕ್ಕಿಲ್ಲಾಯ ಮೇ. 23ರಂದು ಫೇಸ್‌ಬುಕ್ ನಲ್ಲಿ ಸಂವಾದ ನಡೆಸಲಿದ್ದು, ಸಂವಾದದಲ್ಲಿ ಡಾ. ಬಾಲಸರಸ್ವತಿ ಅವರೂ ಜೊತೆಯಾಗಲಿದ್ದಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಮಾಂಸಾಹಾರವನ್ನು ಕಕ್ಕಿಲ್ಲಾಯರು ಈ ಹಿಂದಿನಿಂದಲೂ ಪ್ರೋತ್ಸಾಹಿಸುತ್ತಿದ್ದರು.
ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿದಾಗ ಮೀನುಗಾರಿಕೆ ಅನುಮತಿ ನೀಡಿ, ಮೀನಿನಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇದೆ ಎಂದು ಕಕ್ಕಿಲ್ಲಾಯ ಸರಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದರು.