ಹೆತ್ತವ್ವೆಯ ಮುಂಭಾಗದಲ್ಲೇ ಐದು ವರ್ಷದ ಮಗುವಿನ ಶಿರಚ್ಛೇದನ- ಆರೋಪಿಯನ್ನು ಹೊಡೆದು ಕೊಂದ ಸ್ಥಳೀಯರು
Saturday, September 27, 2025
ಮಧ್ಯಪ್ರದೇಶ: ಹೆತ್ತತಾಯಿಯ ಮುಂಭಾಗದಲ್ಲೇ ವ್ಯಕ್ತಿಯೋರ್ವನು ಆಕೆಯ 5ವರ್ಷದ ಮಗುವಿನ ಶಿರಚ್ಛೇದ ಮಾಡಿದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ. ಹತ್ಯೆಗೈದವನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮಹೇಶ್ (25) ಬೈಕ್‌ನಲ್ಲಿ ಬಂದು ಕಾಲ್ ಸಿಂಗ್ ಎಂಬವರ ಮನೆಗೆ ಏಕಾಏಕಿ ಪ್ರವೇಶಿಸಿದ್ದಾನೆ. ಈ ಮನೆಯವರು ಆತನನ್ನು ಇದುವರೆಗೆ ನೋಡಿರಲಿಲ್ಲ. ಯಾರೊಂದಿಗೂ ಮಾತು ಆಡದ ಮಹೇಶ್ ಇದ್ದಕ್ಕಿದ್ದಂತೆ ಮನೆಯಲ್ಲಿ ಬಿದ್ದಿದ್ದ ಹರಿತವಾದ ಗುದ್ದಲಿಯನ್ನು ಎತ್ತಿಕೊಂಡು ಐದು ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾನೆ. ಮಗುವಿನ ಕುತ್ತಿಗೆಯನ್ನು ಮುಂಡದಿಂದ ಬೇರ್ಪಡಿಸಿದ್ದಾನೆ ಎಂದು ವರದಿಯಾಗಿದೆ.
ಈ ದೃಶ್ಯ ಕಂಡು ಮಗುವಿನ ತಾಯಿ ಗಟ್ಟಿಯಾಗಿ ಚಿರಾಡಿದ್ದಾಳೆ. ಆಕೆಯ ಧ್ವನಿ ಕೇಳಿದ ಅಕ್ಕಪಕ್ಕದ ಮನೆಯವರು ಧಾವಿಸಿ ಆರೋಪಿಯನ್ನು ಹಿಡಿದಿದ್ದಾರೆ. ಈ ವಿಚಾರ ಕ್ಷಣಮಾತ್ರದಲ್ಲಿ ಹಳ್ಳಿಯಾದ್ಯಂತ ಸುದ್ದಿಯಾಗಿದೆ. ಹಳ್ಳಿಯಲ್ಲಿನ ಜನರು ಆರೋಪಿಯನ್ನು ಹಿಡಿದು ಕೊಂದಿದ್ದಾರೆ ಎಂದು ವರದಿಯಾಗಿದೆ.
ಮೃತ ಆರೋಪಿ ಮಹೇಶ್ ಅಲಿರಾಜ್‌ಪುರ ಜಿಲ್ಲೆಯ ಜೋಬತ್ ಬಾಗ್ನಿ ನಿವಾಸಿ ಎಂದು ತನಿಖೆಯಿಂದ ತಿಳಿದುಬಂದಿದೆ. ಆತ ಮಾನಸಿಕ ಅಸ್ವಸ್ಥನಾಗಿದ್ದು, ಮೂರು ನಾಲ್ಕು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದ ಎಂದು ಆತನ ಕುಟುಂಬ ಪೊಲೀಸರಿಗೆ ತಿಳಿಸಿದೆ. ಇದೀಗ ಪ್ರಕರಣದ ತನಿಖೆ ನಡೆಯುತ್ತಿದೆ.