ಮಂಗಳೂರು: ಜನನಿಬಿಡ ಪ್ರದೇಶದಲ್ಲಿ ಚಿನ್ನದ ಮಳಿಗೆ ಸಿಬ್ಬಂದಿಯ ಕಿಡ್ನ್ಯಾಪ್ ಮಾಡಿ ಚಿನ್ನದ ಗಟ್ಟಿ ದರೋಡೆ- ಅಪ್ರಾಪ್ತ ಸೇರಿ ಐವರು ಪೊಲೀಸ್ ಬಲೆಗೆ
Monday, September 29, 2025
ಮಂಗಳೂರು: ಜನನಿಬಿಡ ಪ್ರದೇಶದಲ್ಲಿ ಮಂಗಳೂರಿನ ಚಾಯ್ಸ್‌ಗೋಲ್ಡ್ ಜ್ಯುವೆಲ್ಲರಿ ಶಾಪ್ ಸಿಬ್ಬಂದಿಯನ್ನು ಕಾರಿನಲ್ಲಿ ಅಪಹರಿಸಿ 1.500 ಕೆಜಿ ಚಿನ್ನದ ಗಟ್ಟಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡೇ ದಿನಗಳಲ್ಲಿ ಅಪ್ರಾಪ್ತ ಸೇರಿದಂತೆ ಉಳ್ಳಾಲ ಮೂಲದ ಐವರು ಆರೋಪಿಗಳನ್ನು ಕಂಬಿ ಹಿಂದೆ ಕಳಿಸಿದ್ದಾರೆ.
ಉಳ್ಳಾಲ ತಾಲೂಕಿನ ಕೋಟೆಕಾರಿನ ಕೆ.ಸಿ.ರೋಡ್ ನಿವಾಸಿ ಫಾರಿಶ್(18), ಮುಕ್ಕಚ್ಚೇರಿ ನಿವಾಸಿ ಸಫ್ವಾನ್(23), ಮಾಸ್ತಿಕಟ್ಟೆ ನಿವಾಸಿ ಅರಾಫತ್ ಆಲಿ(18), ಉಳ್ಳಾಲ ದರ್ಗಾ ಬಳಿಯ ನಿವಾಸಿ ಫರಾಝ್(19) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಮಂಗಳೂರು ಹಂಪನಕಟ್ಟೆಯಲ್ಲಿರುವ ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈ ಹಿಂದೆ ಇದೇ ಅಂಗಡಿಯಲ್ಲಿ ಕೆಲಸಕ್ಕಿದ್ದ ಫಾರಿಶ್ ಎಂಬಾತನಿಗೆ ಚಿನ್ನದ ಗಟ್ಟಿಯನ್ನು ಕೊಂಡುಹೋಗುವ ಮಾಹಿತಿ ನೀಡಿದ್ದ. ಅದರಂತೆ ಸೆ.26ರಂದು ರಾತ್ರಿ 8:30ರ ಸುಮಾರಿಗೆ ಸಿಬ್ಬಂದಿ ಮುಸ್ತಾಫ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ಫಾರಿಶ್‌ಗೆ ಮಾಹಿತಿ ನೀಡಿದ್ದ. ಅದರಂತೆ ಎಲ್ಲಾ ಆರೋಪಿಗಳು ಸೇರಿ ಚಿನ್ನದ ಗಟ್ಟಿ ದರೋಡೆಗೆ ಸಂಚು ರೂಪಿಸಿದ್ದರು. ಆರೋಪಿ ಸಫ್ವಾನ್ ಕೃತ್ಯಕ್ಕೆ ಕಾರನ್ನು ಒದಗಿಸಿದ್ದ.
ಮುಸ್ತಾಫ ತಮ್ಮ ಸ್ಕೂಟರ್‌ನ ಸೀಟ್ ಅಡಿಭಾಗದಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದ ಸಂದರ್ಭ ಆರೋಪಿಗಳಾದ ಅರಾಫತ್ ಆಲಿ ಮತ್ತು ಫರಾಝ್ ಅವರು ಕಾರ್‌ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಬಳಿ ಸ್ಕೂಟರಿನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಇದೇ ಸಂದರ್ಭ ಉಳಿದ ಆರೋಪಿಗಳು ಕಾರಿನಲ್ಲಿ ಬಂದು ಮುಸ್ತಾಫರನ್ನು ಬಲತ್ಕಾರವಾಗಿ ಕಾರಿನಲ್ಲಿ ಕೂರಿಸಿ ಅಪಹರಿಸಿದ್ದಾರೆ.
ಕಾರಿನಲ್ಲಿ ಹಲ್ಲೆಗೈದು ಮಂಗಳೂರು ಎಕ್ಕೂರು ಎಂಬಲ್ಲಿ ಅವರನ್ನು ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ್ದಾರೆ. ಸದ್ಯ ಪ್ರಕರಣದಲ್ಲಿ ಸ್ಕೂಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲು ಬಾಕಿಯಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
ಈ ಪ್ರಕರಣದ ಆರೋಪಿಗಳನ್ನು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಮಂಗಳೂರು ನಗರ ಮತ್ತು ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ, ಸಹಾಯಕ ಪೊಲೀಸ್ ಆಯುಕ್ತರು, ಸಿಸಿಬಿ ಘಟಕ ಮಂಗಳೂರು ರವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿ ಹಾಗೂ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರ ಜಂಟಿ ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದಾರೆ.
ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 111/2025 ಕಲಂ 137(2), 310(2) BNS -2023 ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.