ಬೆಂಗಳೂರು: ಚಿನ್ನ ಕಳ್ಳಸಾಗಾಟ ಪ್ರಕರಣ- ನಟಿ ರನ್ಯಾ ರಾವ್‌ಗೆ 102 ಕೋಟಿ ರೂ. ಮೊತ್ತದ ದಂಡ
Tuesday, September 2, 2025
ಬೆಂಗಳೂರು: ಚಿನ್ನ ಕಳ್ಳಸಾಗಾಟ ಪ್ರಕರಣದಲ್ಲಿ ನಟಿ ರನ್ಯಾ ರಾವ್ 127 ಕೆ.ಜಿ ಚಿನ್ನದ ಅಕ್ರಮ ಸಾಗಾಟ ಮಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) 102 ಕೋಟಿ ರೂ. ಮೊತ್ತದ ದಂಡ ವಿಧಿಸಿದೆ.
ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14.2 ಕೆ.ಜಿ.ಯಷ್ಟು ಚಿನ್ನಕಳ್ಳಸಾಗಣೆ ಮಾಡಿ, ಮಾರ್ಚ್ 3ರಂದು ಡಿಆರ್‌ಐ ಅಧಿಕಾರಿಗಳ ಕೈಗೆ ರನ್ಯಾ ರಾವ್ ಸಿಕ್ಕಿಬಿದ್ದಿದ್ದರು. ಚಿನ್ನಕಳ್ಳಸಾಗಣೆಯಲ್ಲಿ ಭಾಗಿಯಾದ ಆರೋಪದಲ್ಲಿ ಉದ್ಯಮಿ ತರುಣ್ ಕೊಂಡರಾಜು, ಕಳ್ಳಸಾಗಣೆಯ ಚಿನ್ನ ಮಾರಾಟ ಮಾಡಿದ ಮತ್ತು ಹವಾಲಾ ಮೂಲಕ ಹಣ ಕಳುಹಿಸಿದ ಆರೋಪದಲ್ಲಿ ಆಭರಣ ವ್ಯಾಪಾರಿ ಸಾಹಿಲ್ ಸಖಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ಅವರನ್ನು ಡಿಆರ್‌ಐ ಬಂಧಿಸಿತ್ತು. ನಾಲ್ವರೂ ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಚಿನ್ನ ಕಳ್ಳಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪ ಹೊತ್ತಿರುವ ರನ್ಯಾ ರಾವ್ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (ಕಾಫಿಫೋಸಾ) ಅಡಿ ಪ್ರಕರಣ ದಾಖಲಿಸಿದ್ದು, ₹102 ಕೋಟಿ ದಂಡ ಪಾವತಿಸುವಂತೆ ಡಿಆರ್‌ಐ ನೋಟಿಸ್‌ನಲ್ಲಿ ಸೂಚಿಸಿದೆ.
ಇತರ ಆರೋಪಿಗಳಿಗೂ ದಂಡ:
ಡಿಆರ್‌ಐ ಮುಂಬೈ ವಿಭಾಗದ ಅಧಿಕಾರಿಗಳು ಮಂಗಳವಾರ ಕೇಂದ್ರ ಕಾರಾಗ್ರಹಕ್ಕೆ ತೆರಳಿ, ನಾಲ್ವರು ಅಪರಾಧಿಗಳಿಗೂ ನೋಟಿಸ್ ನೀಡಿದ್ದಾರೆ. ಕೊಂಡರಾಜು 67 ಕೆ.ಜಿ 600 ಗ್ರಾಂ ಚಿನ್ನ ಕಳ್ಳಸಾಗಣೆಗೆ 62 ಕೋಟಿ ದಂಡ ವಿಧಿಸಿದೆ. ಸಾಹಿಲ್ ಸಖಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ 63 ಕೆಜಿ ಚಿನ್ನ ಕಳ್ಳಸಾಗಣೆಗೆ ಇಬ್ಬರಿಗೂ ತಲಾ 53ಕೋಟಿ ರೂ.ದಂಡ ವಿಧಿಸಿದೆ. ಕಳ್ಳಸಾಗಣೆಯ ಚಿನ್ನದ ಮಾರುಕಟ್ಟೆ ಮೌಲ್ಯ, ಆಮದು ತೆರಿಗೆಯ ಮೊತ್ತವನ್ನು ಒಳಗೊಂಡು ದಂಡ ವಿಧಿಸಲಾಗಿದೆ. ಆರೋಪಿಗಳು ದಂಡ ಕಟ್ಟಿದರೂ, ಅವರ ವಿರುದ್ಧ ಅಪರಾಧ ಪ್ರಕರಣ ರದ್ದಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?:
ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನವಾಗಿತ್ತು. ಕಳೆದ ಮಾರ್ಚ್ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ,ನಟಿ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು. ರನ್ಯಾ ರಾವ್ ಮತ್ತು ಅವರ ಸಹಚರರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.