ಜಿಲೆಟಿನ್ ಸಿಡಿಸಿ ಪ್ರೇಯಸಿಯನ್ನು ಕೊಲೆಗೈದ ಪ್ರಿಯಕರ
Monday, August 25, 2025
ಮೈಸೂರು: ಪತಿ ದುಬೈನಲ್ಲಿ. ಊರಿನಲ್ಲಿ ಪತ್ನಿಯ ಲವ್ವಿಡವ್ವಿ. ಆದರೆ ಇದೀಗ ಹಳೆ ಪ್ರೇಮಿಯ ಕೈಯಿಂದಲೇ ದುರಂತವಾಗಿ ಮಸಣ ಸೇರಿದ್ದಾಳೆ. ತವರು ಮನೆಗೆ ಬಂದವಳು ತನ್ನ ಮಗುವನ್ನು ಬಿಟ್ಟು ಅತ್ತೆ ಮನೆಗೆ ಹೋಗುತ್ತೇನೆಂದು ಹೇಳಿ ಪ್ರಿಯಕರನೊಂದಿಗೆ ಲಾಡ್ಜ್ ಹೋದವಳು, ಬಂಡೆ ಸಿಡಿಸುವ ಜಿಲೆಟ್ ಕಡ್ಡಿಯಿಂದ ಸಿಡಿದು ಭೀಕರವಾಗಿ ಹತ್ಯೆಯಾಗಿದ್ದಾಳೆ.
ಹುಣಸೂರು ತಾಲೂಕಿನ ಗೆರಸನಹಳ್ಳಿ ನಿವಾಸಿ ರಕ್ಷಿತಾ (20) ಹತ್ಯೆಯಾದವಳು.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗೆರಸನಹಳ್ಳಿಯ ರಕ್ಷಿತಾಳನ್ನು ಕೇರಳದ ಸುಭಾಷ್ ಎಂಬಾತನಿಗೆ ಮೂರು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ 2 ವರ್ಷದ ಮಗುವಿದೆ. ಆದರೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಿದ್ದರಾಜುವಿನೊಂದಿಗೆ ಈಕೆಗೆ ವಿವಾಹಪೂರ್ವ ಪ್ರೇಮದ ಸಂಬಂಧವಿತ್ತು. ಮದುವೆಯಾದ ಬಳಿಕವೂ ಅದು ಮುಂದುವರೆದಿತ್ತು.
ಕೇರಳದಿಂದ ತವರು ಮನೆಗೆ ಬಂದಿದ್ದ ರಕ್ಷಿತಾ ಪ್ರಿಯಕರನನೊಂದಿಗೆ ಸುತ್ತಾಟ ನಡೆಸುತ್ತಿದ್ದಳು ಎನ್ನಲಾಗಿದೆ. ಕಳೆದ ಶುಕ್ರವಾರ ಕೇರಳದಿಂದ ಬಂದು ಮಗುವನ್ನು ತಾಯಿ ಮನೆಯಲ್ಲಿ ಬಿಟ್ಟು ಕೇರಳದಲ್ಲಿ ಅತ್ತೆಗೆ ಉಷಾರಿಲ್ಲವೆಂದು ಸುಳ್ಳು ಹೇಳಿ ಮನೆಯಿಂದ ಹೋಗಿದ್ದಳು. ಬಳಿಕ ಪ್ರಿಯಕರ ಸಿದ್ದರಾಜುನೊಂದಿಗೆ ಸಾಲಿಗ್ರಾಮ ತಾಲೂಕಿನ ಬೇರ್ಯ ಗ್ರಾಮದ ಲಾಡ್ಜ್‌ನಲ್ಲಿ ರೂಂ ಪಡೆದಿದ್ದು ಅಲ್ಲಿಯೇ ದುರಂತ ಸಾವಿಗೀಡಾಗಿದ್ದಾಳೆ.
ಹತ್ತಿರದ ಸಂಬಂಧಿಯೂ ಆಗಿರುವ ಸಿದ್ದರಾಜು ಜೊತೆ ಲಾಡ್ಜ್ ನಲ್ಲಿ ಗಲಾಟೆಯಾಗಿದ್ದು ಮೊದಲೇ ಪ್ಲಾನ್ ಮಾಡಿದ್ದಂತೆ ಜಿಲೆಟಿನ್ ಕಡ್ಡಿಯನ್ನು ಆಕೆಯ ಬಾಯಿಗೆ ಇಟ್ಟು ಸ್ಫೋಟ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ಫೋಟದ ತೀವ್ರತೆಗೆ ರಕ್ಷಿತಾಳ ಮುಖ ಛಿದ್ರವಾಗಿದೆ. ಬಳಿಕ ಮೊಬೈಲ್ ಬ್ಲಾಸ್ಟ್ ಆಗಿದೆ ಎಂದು ಕಥೆ ಕಟ್ಟಿದ್ದ. ಲಾಡ್ಜ್ ಸಿಬ್ಬಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು ಸಾಲಿಗ್ರಾಮ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ಮಾಡಿದ ಮೇಲೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.