ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಗುಂಡೇಟು ಹಾಕಿ ಸೆರೆ ಹಿಡಿದ ಪೊಲೀಸರು
Sunday, August 24, 2025
ನವದೆಹಲಿ: ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆಗೈದ ಆರೋಪದಲ್ಲಿ ಜೈಲು ಸೇರಿರುವ ವಿಪಿನ್ ಭಾಟಿ ಎಂಬಾತ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
36 ಲಕ್ಷ ರೂ. ವರದಕ್ಷಿಣೆ ತರುವಂತೆ ಪೀಡಿಸಿ ನಿಕ್ಕಿ ಭಾಟಿಯನ್ನು ಪತಿ ವಿಪಿನ್ ಬಾಟಿ ಮತ್ತು ಆತನ ಮನೆಯವರು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು ಎಂದು ಮಹಿಳೆಯ ಸೋದರಿ ಕಾಂಚನ ಪೊಲೀಸ್ ದೂರು ನೀಡಿದ್ದರು. 2016ರಲ್ಲಿ ನಿಕ್ಕಿ ಮತ್ತು ವಿಪಿನ್ ಮದುವೆಯಾಗಿತ್ತು. ನಿಕ್ಕಿಯ ಸೋದರಿ ಕಾಂಚನ ಕೂಡಾ ವಿಪಿನ್ ಸಹೋದರ ರೋಹಿತ್ ಎಂಬಾತನನ್ನು ವರಿಸಿ ಅದೇ ಮನೆ ಸೇರಿದ್ದರು. ಕಳೆದ ಗುರುವಾರ ವರದಕ್ಷಿಣೆ ಹಣ ತರುವಂತೆ ಪೀಡಿಸಿ ವಿಪಿನ್ ಮತ್ತು ಆತನ ತಾಯಿ ದಯಾ ಎಂಬಾಕೆ ನಿಕ್ಕಿಗೆ ಹಲ್ಲೆ ನಡೆಸಿದ್ದರು.
ಇದನ್ನು ಪ್ರಶ್ನಿಸಿದ ಕಾಂಚನ ಅವರಿಗೂ ಹಿಗ್ಗಾಮುಗ್ಗ ಬಾರಿಸಿ, ನಿಕ್ಕಿಗೆ ಬೆಂಕಿ ಹಚ್ಚಿದ್ದರು. ಈ ದೃಶ್ಯ ಕಾಂಚನ ಅವರ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ನಿಕ್ಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಬಗ್ಗೆ ಕಾಂಚನ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ವಿಪಿನ್ ನನ್ನು ಪೊಲೀಸರು ಬಂಧಿಸಿದ್ದರು.
ಈ ಮಧ್ಯೆ ರವಿವಾರ ಬೆಳಗ್ಗೆ ಮೃತ ನಿಕ್ಕಿ ತಂದೆ ಭಿಕಾರಿ ಸಿಂಗ್ ಪಾಲ್ಲಾ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ನನ್ನ ಪುತ್ರಿಯ ಹತ್ಯೆಯಲ್ಲಿ ವಿಪಿನ್‌ನ ಇಡೀ ಕುಟುಂಬವೇ ಭಾಗಿಯಾಗಿದೆ. ಅವರನ್ನು ಎನ್‌ಕೌಂಟರ್ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಇದಾದ ಒಂದು ಗಂಟೆಯಲ್ಲೇ ಆರೋಪಿ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದಲ್ಲಿ ಪೊಲೀಸರು ವಿಪಿನ್ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ಈ ಬಗ್ಗೆ ಮತ್ತೆ ಪ್ರತಿಕ್ರಿಯಿಸಿರುವ ನಿಕ್ಕಿ ತಂದೆ ಆತನ ಕಾಲಿಗಲ್ಲ ಎದೆಗೆ ಗುಂಡು ಹೊಡೆದು ಎನ್‌ಕೌಂಟರ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.