ಆಟೋಚಾಲಕನಿಂದ 5ಲಕ್ಷ ವಂಚನೆ ಆರೋಪ- ವಿವಾಹಿತೆ ಆತ್ಮಹತ್ಯೆಗೆ ಶರಣು
Friday, August 29, 2025
ಮೂಡುಬಿದಿರೆ: ಆಟೋಚಾಲಕನೋರ್ವನು ತನಗೆ 5ಲಕ್ಷ ರೂ. ವಂಚನೆಗೈದಿದ್ದಾನೆಂದು ವಿವಾಹಿತೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೋಡಾರಿನಲ್ಲಿ ನಡೆದಿದೆ.
ತೋಡಾರು ನಿವಾಸಿ ಶಫ್ರೀನಾ ಬಾನು(31) ಆತ್ಮಹತ್ಯೆಗೆ ಶರಣಾದ ಮಹಿಳೆ. ಪುತ್ತಿಗೆ ನಿವಾಸಿ ಅಶ್ರಫ್ ಆರೋಪಿ.
ಮೂಡುಬಿದಿರೆಯ ತೋಡಾರು ಗ್ರಾಮದ ಏರ್ ಇಂಡಿಯಾ ಅಪಾರ್ಟ್‌ಮೆಂಟ್ನಲ್ಲಿ ಪತಿ ನವಾಝ್ ಹಾಗೂ ಇಬ್ಬರು ಮಕ್ಕಳೊಂದಿಗೆ ಶಫ್ರೀನಾ ಬಾನು ವಾಸವಾಗಿದ್ದರು. ಇವರ ಕುಟುಂಬಕ್ಕೆ ಪರಿಚಿತನಾಗಿದ್ದ ಆಟೋ ಚಾಲಕ ಅಶ್ರಫ್ ಎಂಬಾತ 7ತಿಂಗಳ ಹಿಂದೆ ಶಫ್ರಿನಾ ಬಾನು ಅವರಿಂದ 2 ಲಕ್ಷ ನಗದು ಹಾಗೂ 3 ಲಕ್ಷ ರೂ. ಮೌಲ್ಯದ ಚಿನ್ನ ಪಡೆದುಕೊಂಡಿದ್ದನು.
ಬಳಿಕ ಶಫೀನಾ ಬಾನು ಅದನ್ನು ಮರಳಿಸುವಂತೆ ಆತನಲ್ಲಿ ಹಲವಾರು ಬಾರಿ ಕೇಳಿದ್ದಾರೆ. ಆದರೆ ಆತ ಇವತ್ತು ಕೊಡುತ್ತೇನೆ-ನಾಳೆ ಕೊಡುತ್ತೇನೆ' ಎಂದು ಸತಾಯಿಸುತ್ತಿದ್ದ. ಅದರಂತೆ ನಿನ್ನೆ ಶಫ್ರಿನಾ ಬಾನು ಮತ್ತೆ ಕರೆ ಮಾಡಿದ್ದಾರೆ. ಆಗ ಅಶ್ರಫ್ ''ಒಂದೋ ನೀನು ನನಗೆ ಇನ್ನೂ ಕಾಲಾವಕಾಶ ನೀಡಬೇಕು. ಈಗಲೇ ಕೊಡಬೇಕು ಎಂದಾದಲ್ಲಿ ನೀನು ನೀಡಿರುವ ಹಣ ಮತ್ತು ಒಡವೆಗೆ ದಾಖಲೆ ಏನಿದೆ" ಎಂದು ಉಡಾಫೆಯಾಗಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದರಿಂದ ಮನನೊಂದ ಶಫ್ರಿನಾ ಬಾನು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶ್ರಫ್‌ನ ದುಷ್ಪ್ರೇರಣೆಯಿಂದ ಶಫ್ರಿನಾ ಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಿಳೆಯ ಪತಿ ನವಾಝ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.