ಧರ್ಮಸ್ಥಳ ಫೈಲ್ಸ್ ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದ ನಿರ್ಮಾಪಕ ಎ.ಗಣೇಶ್
Friday, August 1, 2025
ಬೆಂಗಳೂರು: ಕಾಶ್ಮೀರಿ ಫೈಲ್ಸ್, ಕೇರಳ ಫೈಲ್ಸ್ ಮಾದರಿಯಲ್ಲೇ ಧರ್ಮಸ್ಥಳ ಫೈಲ್ಸ್ ಎಂಬ ಟೈಟಲ್‌ನ ಸಿನಿಮಾ ಮಾಡಲು ತಯಾರು ಮಾಡಿಕೊಳ್ಳಲಾಗಿದೆ. ನಿರ್ಮಾಪಕ ಎ.ಗಣೇಶ್, ಧರ್ಮಸ್ಥಳ ಫೈಲ್ಸ್ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಮಾಡಲು ಫಿಲಂ ಚೇಂಬರ್‌ನಿಂದ ಅನುಮತಿ ದೊರಕಿದೆ ಎಂದು ತಿಳಿಸಿದ್ದಾರೆ.
'ಧರ್ಮಸ್ಥಳ ಫೈಲ್ಸ್' ಹೆಸರಿನಲ್ಲಿ 20ದಿನಗಳ ಹಿಂದೆಯೇ ಟೈಟಲ್ ಬುಕ್ ಮಾಡಿದ್ದೆವು. ಧರ್ಮಸ್ಥಳ ಫೈಲ್ಸ್ ಸಿನಿಮಾ ಮತ್ತು ವೆಬ್‌ಸಿರೀಸ್ ಮಾಡುವ ಪ್ಲಾನ್ ಇದೆ. ಫಿಲಂ ಚೇಂಬರ್‌ನಲ್ಲಿ ಈಗಾಗಲೇ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಸಿನಿಮಾ ಕತೆ ಏನೆಂದು ಇನ್ನಷ್ಟೇ ನಿರ್ಧರಿಸಬೇಕಿದೆ. ಧರ್ಮಸ್ಥಳದಲ್ಲಿ ಆಗುತ್ತಿರುವ ಬೆಳವಣಿಗೆ ಆಧರಿಸಿ ಸಿನಿಮಾ ಮಾಡಲಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಬಳಿ ಪರ್ಮಿಶನ್ ಪಡೆದೇ ಸಿನಿಮಾ ಮಾಡುತ್ತೇವೆ. ವಾಸ್ತವ ವಿಚಾರ, ನೈಜತೆಯನ್ನು ಒಳಗೊಂಡು ಚಿತ್ರಕತೆ ಮಾಡುತ್ತೇವೆ ಎಂದು ಗಣೇಶ್ ಹೇಳಿದ್ದಾರೆ.
ಕಾನೂನು ತೊಡಕು ಉಂಟಾದ್ರೆ ಅದರ ಪ್ರಕ್ರಿಯೆ ಪಾಲಿಸಿಕೊಂಡು ಸಿನಿಮಾ ಮಾಡಲಾಗುವುದು. ವಿಕೆ ಪ್ರಕಾಶ್ ಎನ್ನುವ ಮಲಯಾಲಂ ನಿರ್ದೇಶಕರಿಂದ ಸಿನಿಮಾ ಮಾಡುವ ಪ್ಲಾನ್ ಇದೆ. ಎಂ.ಎಸ್ ರಮೇಶ್ ಅವರಿಂದ ಚಿತ್ರದ ಕಥೆ ತಯಾರು ಮಾಡ್ತಿದೇವೆ. ಶ್ರೀರಾಮ್ ಸೇರಿದಂತೆ ಹಲವು ಸಿನಿಮಾ ಮಾಡಿರುವ ನಿರ್ದೇಶಕರಿಂದ ಕಥೆ ತಯಾರಾಗ್ತಿದೆ. ಓಂ ಶ್ರೀ ಚಾಮುಂಡೇಶ್ವೇರಿ ಪ್ರೊಡಕ್ಷನ್ ಬ್ಯಾನರ್‌ನಡಿ ಸಿನಿಮಾ ತಯಾರಾಗ್ತಿದೆ ಎಂದು ಹೇಳಲಾಗುತ್ತಿದೆ.
ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿರುವುದು ದೇಶಾದ್ಯಂತ ಸಂಚಲನ ಎಬ್ಬಿಸಿದ್ದು ಧರ್ಮಸ್ಥಳ ಫೈಲ್ಸ್ ಎನ್ನುವ ಹಾಗೆ ಬಿಂಬಿಸಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಚಿತ್ರ ತಂಡವೊಂದು ಸಿನಿಮಾ ಮಾಡಲು ಹೊರಟಿದ್ದು ಟೈಟಲ್ ರಿಜಿಸ್ಟರ್ ಮಾಡಿಕೊಂಡಿದೆ. ಇದೀಗ ಕನ್ನಡದ ನಿರ್ಮಾಪಕರಾದ ಎ. ಗಣೇಶ್ ಅವರು ಈ ಸಿನಿಮಾ ನಾನು ಮಾಡ್ತಿದ್ದೇನೆ ಎಂದು ಹೇಳಿಕೆ ನೀಡಿದ್ದು ಮುಂದಿನ ಬೆಳವಣಿಗೆ ಬಗ್ಗೆ ಕುತೂಹಲ ಮೂಡಿಸಿದೆ.