ಮೊಸಳೆಯೊಂದಿಗೆ ಹೋರಾಡಿ ಐದು ವರ್ಷದ ಪುತ್ರನನ್ನು ಸಾವಿನ ದವಡೆಯಿಂದ ಪಾರುಗೊಳಿಸಿದ ಮಹಾತಾಯಿ
Wednesday, August 20, 2025
ಲಕ್ನೋ: 40ವರ್ಷದ ಮಹಿಳೆಯೊಬ್ಬರು ಮೊಸಳೆಯೊಂದಿಗೆ ಹೋರಾಡಿ ತಮ್ಮ ಐದು ವರ್ಷದ ಪುತ್ರನನ್ನು ಸಾವಿನ ದವಡೆಯಿಂದ ರಕ್ಷಿಸಿದ ಅಪರೂಪದ ಘಟನೆ ಸೋಮವಾರ ಸಂಜೆ ಉತ್ತರಪ್ರದೇಶದ ಬಹರೀಚ್‌ನ ಧಾಕಿಯಾ ಗ್ರಾಮದಲ್ಲಿ ನಡೆದಿದೆ.
ಐದು ವರ್ಷದ ಪುತ್ರ ವೀರೂ ನಾಲೆಯ ಬಳಿ ಆಟವಾಡುತ್ತಿದ್ದ. ಈ ವೇಳೆ ಏಕಾಏಕಿ ಮೊಸಳೆಯೊಂದು ಆತನನ್ನು ಹಿಡಿದು ನೀರಿನತ್ತ ಎಳೆದಿದೆ. ಮಗುವಿನ ಆಕ್ರಂದನ ಕೇಳಿಸಿಕೊಂಡ ತಾಯಿ ಮಾಯಾ ಏಳು ಅಡಿ ಉದ್ದದ ಮೊಸಳೆಯೊಂದಿಗೆ ತನ್ನೆಲ್ಲ ಶಕ್ತಿಯನ್ನು ಬಳಸಿ ಸೆಣಸಾಡಿ ಪುತ್ರನನ್ನು ಸಾವಿನ ದವಡೆಯಿಂದ ಕಾಪಾಡಿದ್ದಾಳೆ.
"ತನ್ನ ಜೀವದ ಹಂಗು ತೊರೆದು ನಾಲೆಗೆ ಧುಮುಕಿದ್ದೇನೆ. ಮೊಸಳೆ ಆತನನ್ನು ಆಳಕ್ಕೆ ಎಳೆಯುತ್ತಿತ್ತು. ಆದರೆ ನಾನು ನನ್ನೆಲ್ಲ ಶಕ್ತಿಯನ್ನು ಬಳಸಿ ಪುತ್ರನನ್ನು ಹಿಡಿದುಕೊಂಡೆ. ಮೊಸಳೆಗೆ ಹೊಡೆದೆ, ಪರಚಿದೆ. ಅದರೂ ಅದು ಬಿಡಲಿಲ್ಲ. ಅಂತಿಮವಾಗಿ ಕಬ್ಬಿಣದ ರಾಡ್ ನಿಂದ ಮೊಸಳೆಗೆ ಹೊಡೆದಾಗ ಅದು ವೀರೂವನ್ನು ಬಿಟ್ಟು, ನೀರಿನಲ್ಲಿ ಕಣ್ಮರೆಯಾಯಿತು. ಚರಂಡಿಯಲ್ಲಿ ಐದು ನಿಮಿಷಗಳ ಕಾಲ ಹೋರಾಡಿದ ನನಗೆ ಪ್ರತಿ ಕ್ಷಣವೂ ಸಾವು ಮತ್ತು ಬದುಕಿನ ಹೋರಾಟವಾಗಿತ್ತು ಎಂದು ಮಾಯಾ ಹೇಳಿದರು.
ವೀರೂಗೆ ತೀವ್ರ ಗಾಯವಾಗಿದೆ. ಮಾಯಾಗೆ
ತರಚಿದ ಗಾಯಗಳಾಗಿದೆ. ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಕೊಡಿಸಲಾಗುತ್ತಿದೆ.