ಸುಂದರವಾಗಿದ್ದ ಪತ್ನಿಯ ಕೇಶ ಮುಂಡನ ಮಾಡಿ ಕೂಡಿ ಹಾಕಿ ಹಲ್ಲೆ: ಪತಿ, ಮಾವನ ಕಿರುಕುಳ ತಾಳಲಾರದೆ ಫೇಸ್‌ಬುಕ್‌ನಲ್ಲಿ ಡೆತ್‌ನೋಟ್ ಬರೆದಿಟ್ಟು ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣು
Wednesday, July 16, 2025
ಕೊಲ್ಲಂ: ಪತಿ ಹಾಗೂ ಮಾವನ ಕಿರುಕುಳದಿಂದ ಬೇಸತ್ತ 32 ವರ್ಷದ ಕೇರಳ ಮೂಲದ ಯುವತಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗುವನ್ನು ಸಾಯಿಸಿ ಫೇಸ್‌ಬುಕ್‌ನಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಶಾರ್ಜಾದಲ್ಲಿ ನಡೆದಿದ್ದು, ಈ ಬಗ್ಗೆ ಕೊಲ್ಲಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 8ರಂದು ಶಾರ್ಜಾದ ಅಅಲ್ ನಹಾದಾ ಎಂಬಲ್ಲಿ ಕೊಲ್ಲಂ ಮೂಲದ ಮಹಿಳೆ ವೈಪಂಜಿಕಾ ಮಣಿ ತನ್ನ ಒಂದೂವರೆ ವರ್ಷದ ಪುತ್ರಿ ವೈಭವಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಫೇಸ್‌ಬುಕ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ಪತಿ, ಮಾವ ಮತ್ತು ಪತಿಯ ಅಕ್ಕನ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿದ್ದಾಳೆ. ಇದನ್ನು ಆಧರಿಸಿ ಯುವತಿ ತಾಯಿ ಕೊಲ್ಲಂ ಪೊಲೀಸರಿಗೆ ದೂರು ನೀಡಿದ್ದಾರೆ. ವೈಪಂಜಿಕಾ ಅವರ ಪತಿ ನಿಧೀಶ್, ಆತನ ಅಕ್ಕ ನೀತು ಮತ್ತು ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ.
ಪತಿ ನಿಧೀಶ್ ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ಪುತ್ರಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ತಾಯಿ ದೂರು ನೀಡಿದ್ದಾರೆ. ವೈಪಂಜಿಕಾ ಮಣಿ ನೋಡಲು ಶ್ವೇತವರ್ಣದ ಸ್ಪುರದ್ರೂಪಿಯಾಗಿದ್ದಾಳೆ. ಆದರೆ ಆಕೆಯ ಪತಿ ನಿಧೀಶ್ ಮತ್ತು ಆತನ ಕುಟುಂಬಸ್ಥರು ನೋಡಲು ಆಕರ್ಷಕವಾಗಿರಲಿಲ್ಲ. ಈಕೆ ಬಿಳಿಯಾಗಿದ್ದು, ಅಷ್ಟು ಸುಂದರವಾಗಿದ್ದಾಳೆಂದು ಇನ್ನಾರೊಂದಿಗೆ ಸಂಬಂಧ ಇರಿಸಿದ್ದಾಳೆಂದು ಶಂಕಿಸಿ ಪತಿ ಕಿರುಕುಳ ನೀಡುತ್ತಿದ್ದ. ಅಲ್ಲದೆ, ನೀನು ಸುಂದರವಾಗಿ ಕಾಣಬಾರದು, ಕುರೂಪಿಯಾಗಿ ಇರಬೇಕು ಎಂದು ಹೇಳಿ ಆಕೆಯ ಕೂದಲನ್ನು ಪೂರ್ತಿಯಾಗಿ ಕತ್ತರಿಸಿ ಕೇಶ ಮುಂಡನ ಮಾಡಿಸಿದ್ದ. ಡೈವರ್ಸ್ ಕೊಟ್ಟು ಬಿಡು, ನಾನು ತವರು ಹೋಗುತ್ತೇನೆ ಎಂದಿದ್ದಕ್ಕೆ ಆಕೆಯನ್ನು ಮನೆಯಲ್ಲಿ ಕೂಡಿಹಾಕಿ ತಲೆ ಬೋಳಿಸಿದ್ದ.
ಆದ್ದರಿಂದ, ಆಕೆ ತನಗೆ ನೀಡುತ್ತಿದ್ದ ಕ್ರೂರ ಶಿಕ್ಷೆಯ ಬಗ್ಗೆ ಬರೆದುಕೊಂಡಿದ್ದು, ಮಾವ ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮೈಗೆ ಕೈಹಾಕಿದ್ದನ್ನು ಪತಿಯಲ್ಲಿ ಹೇಳಿದಾಗ, ನೀನು ನನಗೆ ಮಾತ್ರವಲ್ಲ, ನನ್ನ ತಂದೆಯೊಂದಿಗೂ ಸಹಕರಿಸಬೇಕು. ನಿನ್ನನ್ನು ನನ್ನ ತಂದೆಗಾಗಿ ಮದುವೆಯಾಗಿದ್ದೇನೆ ಎಂದು ಹೇಳಿದ್ದ. ಮೊಬೈಲಿನಲ್ಲಿ ಕೆಲವು ಅಶ್ಲೀಲ ವಿಡಿಯೋಗಳನ್ನು ತೋರಿಸಿ ಬೆಡ್‌ನಲ್ಲಿ ನೀನೂ ಇದೇ ರೀತಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದ. ನನಗೆ ನಾಯಿಗೆ ಹೊಡೆದಂತೆ ಹೊಡೆಯುತ್ತಿದ್ದರು. ನನಗಿನ್ನು ಈ ಹಿಂಸೆಯನ್ನು ಸಹಿಸಲಾಗದು. ಆದರೆ ಇವರನ್ನು ಎಂದಿಗೂ ಹಾಗೇ ಬಿಡಬೇಡಿ. ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಡೆತ್ ನೋಟ್ ಬರೆದಿದ್ದಾಳೆ.