ಮಂಗಳೂರು: ಹಿಂದೂ ಯುವತಿಯರ ಮತಾಂತರಿಸಿದ್ದಾರೆಂಬ ಸುಳ್ಳು ಪ್ರಚಾರ- ಓರ್ವ ಅರೆಸ್ಟ್, ಕೋಡಿಕೆರೆ ಲೋಕಿ ಸೇರಿ ಇಬ್ಬರ ವಿರುದ್ಧ ಪ್ರಕರಣ
Tuesday, July 15, 2025
ಮಂಗಳೂರು: ಹಿಂದೂ ಯುವತಿಯರನ್ನು ಮತಾಂತರ ಮಾಡಿದ್ದಾರೆಂದು ವ್ಯಕ್ತಿಯೊಬ್ಬರ ಬಗ್ಗೆ ಕೋಮುದ್ವೇಷ ಮೂಡಿಸುವ ರೀತಿ ಬರೆದು ವಾಟ್ಸ್‌ಆ್ಯಪ್‌ನಲ್ಲಿ ವೈರಲ್ ಮಾಡಿರುವ ಆರೋಪಿಯನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುಳಾಯಿ ನಿವಾಸಿ ರಾಮ್‌ಪ್ರಸಾದ್(42) ಬಂಧಿತ ಆರೋಪಿ.
ಸುರತ್ಕಲ್ ಹೊಸಬೆಟ್ಟುವಿನಲ್ಲಿರುವ ಆರ್.ವಿ.ಎಂಟರ್ ಪ್ರೈಸಸ್ ಎಂಬ ಉದ್ಯಮ ನಡೆಸುತ್ತಿರುವ ರಾಜೇಶ್ ಹೊನ್ನಕಟ್ಟೆ ಎಂಬವರ ಬಗ್ಗೆ ಹಿಂದೂಗಳಲ್ಲಿ ಕೋಮು ಭಾವನೆ ಕೆರಳಿಸುವ ರೀತಿ ವಾಟ್ಸಆ್ಯಪ್‌ನಲ್ಲಿ ಬರೆದು ಷೇರ್ ಮಾಡಿದ್ದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಜೇಶ್ ಈವರೆಗೆ 20ಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡಿದ್ದಾರೆ. ಅಲ್ಲದೆ, ಬ್ಲೂಫಿಲಂ ಸಿಡಿ ಮಾಡಿ ಮಾರಾಟ ಮಾಡುತ್ತಿದ್ದಾರೆ. 24ವರ್ಷದ ಹಿಂದೂ ಯುವತಿಯನ್ನು ತನ್ನ ಸಹೋದರನಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾನೆ. ಆ ಹಿಂದೂ ಯುವತಿ ಹಣೆಗೆ ಕುಂಕುಮ ಹಾಕುವುದನ್ನು, ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿದ್ದು ಚರ್ಚ್ ನಲ್ಲಿ ಪ್ರಾರ್ಥನೆಗೆ ಹೋಗುತ್ತಿದ್ದಾಳೆ ಇತ್ಯಾದಿ ಸುಳ್ಳು ಆರೋಪಗಳನ್ನು ವಾಟ್ಸ್‌ಆ್ಯಪ್ ಗ್ರೂಪ್ ಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಕುಳಾಯಿ ನಿವಾಸಿ ರಾಮಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ರೌಡಿ ಕೋಡಿಕೆರೆ ಲೋಕೇಶ್ ಕೂಡ ಭಾಗಿಯಾದ ಆರೋಪವಿದ್ದು, ಸದ್ಯಕ್ಕೆ ಆತ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿ ಉಡುಪಿ ಜಿಲ್ಲಾ ಕಾರಾಗೃಹದಲ್ಲಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಡಿ ವಾರೆಂಟ್ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.