ಬೆಂಗಳೂರು: ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪತ್ನಿಯ ಒತ್ತಾಯ- ಠಾಣೆಯ ಮೆಟ್ಟಿಲೇರಿದ ಪತಿ ಮಹಾಶಯ
ಬೆಂಗಳೂರು: ಪತ್ನಿ ತನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾಳೆ ಎಂದು ಆರೋಪಿಸಿ ಗದಗ ಜಿಲ್ಲೆಯ ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ವಿಶಾಲ್ ಕುಮಾರ್ ಗೋಕವಿ ಎಂಬ ಯುವಕ ತಹಸೀನ್ ಹೊಸಮನಿ ಎಂಬಾಕೆಯೊಂದಿಗೆ ಮೂರು ವರ್ಷಗಳ ಕಾಲ ಪ್ರೀತಿಯ ಬಲೆಯಲ್ಲಿದ್ದ. 2024ರ ನವೆಂಬರ್‌ನಲ್ಲಿ ಇಬ್ಬರೂ ವಿವಾಹ ನೋಂದಣಿ ಮಾಡಿಕೊಂಡಿದ್ದರು. ಅದಾದ ಬಳಿಕ, ತಹಸೀನ್ ಹೊಸಮನಿ ತಾವು ಮುಸ್ಲಿಂ ಪದ್ಧತಿ ಪ್ರಕಾರ ಮತ್ತೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.
ಸಂಬಂಧದಲ್ಲಿ ನೆಮ್ಮದಿಯನ್ನು ಕಾಪಾಡಿಕೊಳ್ಳಲು, ಎಪ್ರಿಲ್ 25ರಂದು ಮುಸ್ಲಿಂ ವಿಧಿವಿಧಾನಗಳ ಪ್ರಕಾರ ವಿವಾಹವಾದೆವು. ಈ ಸಂದರ್ಭ ತನಗೆ ಅರಿವಿಲ್ಲದೆಯೇ ತನ್ನ ಹೆಸರನ್ನು ಬದಲಾಯಿಸಲಾಗಿದೆ. ಅಲ್ಲದೆ, 'ಮೌಲ್ವಿ' ನನಗೆ ತಿಳಿಯದೆಯೇ ನನ್ನನ್ನು ಮತಾಂತರಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಗೋಕಾವಿ ಮುಸ್ಲಿಂ ಪದ್ಧತಿಗಳ ಪ್ರಕಾರ ಹೊಸಮನಿ ಅವರನ್ನು ಮದುವೆಯಾಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಬಳಿಕ ಜೂನ್ 5 ರಂದು ಹಿಂದೂ ವಿಧಿವಿಧಾನಗಳೊಂದಿಗೆ ತಮ್ಮ ಕುಟುಂಬವು ಕೂಡ ವಿವಾಹವನ್ನು ಏರ್ಪಡಿಸಿತ್ತು. ಹೊಸಮಣಿ ಆರಂಭದಲ್ಲಿ ಇದಕ್ಕೆ ಒಪ್ಪಿದ್ದಳು. ಆದರೆ, ಅವರ ಕುಟುಂಬದ ಒತ್ತಡದಿಂದ ಬಳಿಕ ಅದರಿಂದ ಆಕೆ ಹಿಂದೆ ಸರಿದರು ಎಂದು ಅವರು ಆರೋಪಿಸಿದರು.
ಇಸ್ಲಾಂಗೆ ಮತಾಂತರಗೊಳ್ಳದಿದ್ದರೆ, ನನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದಾಳೆ. ಹೊಸಮಣಿ ಮತ್ತು ಅವರ ತಾಯಿ ಬೇಗಂ ಬಾನು ತನಗೆ ನಮಾಜ್ ಮಾಡಲು ಮತ್ತು ಜಮಾತ್‌ಗೆ ಹಾಜರಾಗಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಬುಧವಾರ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 299 (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು ಸೆಕ್ಷನ್ 302 (ವ್ಯಕ್ತಿಗಳ ಧಾರ್ಮಿಕ ಭಾವನೆಗಳಿಗೆ ಹಾನಿ ಮಾಡುವ ಉದ್ದೇಶದಿಂದ ಮಾಡಿದ ಕ್ರಮಗಳಿಂದ ರಕ್ಷಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.