ತುಂಬೆ ವೆಂಟೆಡ್ ಡ್ಯಾಮ್‌ನಿಂದ ಕೃಷಿ ಭೂಮಿ ಹಾನಿ: ಪಂಪ್‌ಹೌಸ್‌ಗೆ ಬೀಗ ಜಡಿದು ಹೋರಾಟ - ರೈತ ಸಂಘ ಎಚ್ಚರಿಕೆ
ತುಂಬೆ ವೆಂಟೆಡ್ ಡ್ಯಾಮ್‌ನಿಂದ ಕೃಷಿ ಭೂಮಿ ಹಾನಿ: ಪಂಪ್‌ಹೌಸ್‌ಗೆ ಬೀಗ ಜಡಿದು ಹೋರಾಟ - ರೈತ ಸಂಘ ಎಚ್ಚರಿಕೆ
ಬಂಟ್ವಾಳ ತಾಲೂಕಿನ ತುಂಬೆ ವೆಂಟೆಡ್ ಡ್ಯಾಮ್‌ನಿಂದಾಗಿ ನೀರು ಹರಿದು ಹೋಗಿ ನೀರಿನ ರಭಸಕ್ಕೆ ನೂರಾರು ಎಕರೆ ಪ್ರದೇಶದ ಕೃಷಿ ಭೂಮಿ ಹಾನಿಯಾಗಿದ್ದು, ತಕ್ಷಣ ನಗರ ಪಾಲಿಕೆ ಮಧ್ಯಪ್ರವೇಶ ಮಾಡಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ರೈತ ಸಂಘ ಆಗ್ರಹಿಸಿದೆ.
ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಪಂಪ್‌ಹೌಸ್‌ಗೆ ಬೀಗ ಜಡಿದು ಹೋರಾಟ ಮಾಡುವುದಾಗಿ ರೈತ ಸಂಘ ಎಚ್ಚರಿಕೆ ನೀಡಿದೆ.
ಮಂಗಳೂರಿನಲ್ಲಿ ಮಾತನಾಡಿದ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ. ಶ್ರೀಧರ ಶೆಟ್ಟಿ ಬೈಲಗುತ್ತು ಈ ಮಾಹಿತಿ ನೀಡಿದ್ದಾರೆ.
ತುಂಬೆ ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ರೈತರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಕಳೆದ ಒಂದು ವರ್ಷದಿಂದ ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದ್ದೇವೆ. ಸಮಸ್ಯೆ ಬಗೆಹರಿಸಿ ಎಂದು ವಿನಂತಿಸಿದ್ದೇವೆ. ಆದರೆ, ಅಧಿಕಾರಿಗಳು ನಮ್ಮ ವಿನಂತಿಯನ್ನು ನಿರ್ಲಕ್ಷಿಸಿದ್ದಾರೆ. ಮನವಿಯನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನಮ್ಮ ಸಹನೆಗೂ ಮಿತಿ ಇದೆ. ನೀರಿನ ರಭಸದಿಂದ ನಮ್ಮ ಕೃಷಿ ಭೂಮಿ ಹಾಳಾಗಿದೆ. ಇನ್ನು ನಾವು ಕೈಕಟ್ಟಿ ಕೂರುವುದಿಲ್ಲ. ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಪಂಪ್‌ಹೌಸ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.