ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಬೃಜೇಶ್ ಚೌಟ: ರಾಜ್ಯ ರಾಜಕೀಯದಲ್ಲಿ ಬೆಳೆಯುವ ಮಂಗಳೂರಿನ ಯುವ ಸಿರಿ
ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಬೃಜೇಶ್ ಚೌಟ: ರಾಜ್ಯ ರಾಜಕೀಯದಲ್ಲಿ ಬೆಳೆಯುವ ಮಂಗಳೂರಿನ ಯುವ ಸಿರಿ
ಭಾರತೀಯ ಭೂ ಸೈನ್ಯದ ನಿವೃತ್ತ ಸೇನಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮುಖಂಡ ಕ್ಯಾಪ್ಟನ್ ಬೃಜೇಶ್ ಚೌಟ ಭಾರತೀಯ ಜನತಾ ಪಾರ್ಟಿ(BJP)ಯ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ ಸ್ಥಾನಕ್ಕೆ ನೇಮಕವಾಗಿದ್ದಾರೆ.
ತಮ್ಮ ಕಾಲೇಜು ದಿನಗಳಲ್ಲಿಯೇ ಬೃಜೇಶ್ ಚೌಟ ಅವರು NCCಯಲ್ಲಿ ಹೆಸರುವಾಸಿಯಾಗಿದ್ದು, ಬಳಿಕ ಸೇನೆಗೆ ಸೇರ್ಪಡೆಯಾಗಿದ್ದರು. ಮಂಗಳೂರು ನಗರದ ಮಿಲಾಗ್ರಿಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬಳಿಕ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಮತ್ತು ಬಿಎಸ್ಸಿ ಪದವಿಯನ್ನು ಬೃಜೇಶ್ ಚೌಟ ಪಡೆದಿದ್ದರು.
ನಂತರ ಮಧ್ಯ ಪ್ರದೇಶದ ಇಂದೋರ್ IIMನಲ್ಲಿ ಉನ್ನತ ವ್ಯಾಸಾಂಗ ಪಡೆದಿದ್ದರು. ಪದವಿಯಲ್ಲಿದ್ದಾಗ NCCಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಯಲ್ಲಿ ಶ್ರೇಷ್ಟ ಕೆಡೆಟ್ ಗೌರವಕ್ಕೆ ಪಾತ್ರರಾಗಿದ್ದರು. ದೆಹಲಿ ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲಿ NCC ಕೆಡೆಟ್ ಆಗಿ ಪಾಲ್ಗೊಂಡಿದ್ದರು.
ಯುಪಿಎಸ್‌ಸಿ ಆಯೋಜಿಸುವ ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ ಎಕ್ಸಾಮಿನೇಷನ್ (CDSE) ಪರೀಕ್ಷೆ ಹಾಗೂ SSB ಇಂಟರ್‌ವ್ಯೂ ನಲ್ಲಿ ಪಾಸ್ ಆಗಿ ಚೆನ್ನೈ ಯಲ್ಲಿರುವ ಆಫೀಸರ್ಸ್ ತರಬೇತಿ ಅಕಾಡೆಮಿ (OTA)ಯಲ್ಲಿ ತರಬೇತಿ ಪಡೆದು ಭಾರತೀಯ ಭೂ ಸೈನ್ಯದ ಪ್ರತಿಷ್ಠಿತ 8 ಗೂರ್ಖಾ ರೈಫಲ್ 7 ನೇ ಬಾಟಲಿಯನ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಜೊತೆಗೆ ಅಸ್ಸಾಂ ಮತ್ತು ಮಣಿಪುರ ಸಹಿತ ದೇಶದ ಹಲವು ಕಡೆಗಳಲ್ಲಿ ಅವರು ಸೇವೆ ಸಲ್ಲಿಸಿದರು.
2011ರಲ್ಲಿ ಭೂಸೈನ್ಯದ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ತವರಿಗೆ ಮರಳಿದ ಬೃಜೇಶ್ ಚೌಟ ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. 2013ರಲ್ಲಿ ಭಾರತೀಯ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರಮಿಸಿದ್ದರು.
2016-19ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಜವಾಬ್ದಾರಿಯನ್ನು ಹೊತ್ತು ಕೆಲಸ ಮಾಡಿದ್ದರು.
2015ರಿಂದ ಕರ್ನಾಟಕ ಮಾತ್ರವಲ್ಲದೆ, ಕೇರಳ, ದೆಹಲಿ, ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಏಳಿಗೆಗೆ ಶ್ರಮಿಸಿದ್ದರು. ರಾಜ್ಯ ಬಿಜೆಪಿ ಚುನಾವಣಾ ಸಮಿತಿಯ ಭಾಗವಾಗಿರುವ ಯುವ ಸಂವಾದ ಘಟಕದಲ್ಲಿ ರಾಜ್ಯ ಸಹ ಸಂಚಾಲಕರಾಗಿ ದುಡಿದರು.
ಕರಾವಳಿಯ ಜನಪ್ರಿಯ ಕ್ರೀಡೆಯಾದ ಕಂಬಳದಲ್ಲೂ ಚೌಟ ಛಾಪು ಮೂಡಿಸಿದ್ದಾರೆ. 2015ರಿಂದ ನಿರಂತರ ಕಂಬಳ ಕ್ರೀಡೆಯನ್ನು ಆಯೋಜಿಸಿ ನಗರದಲ್ಲಿ ಜನಪ್ರಿಯತೆ ಪಡೆದಿದ್ದಾರೆ.
'ಮಂಗಳೂರು Lit Fest' ಆಯೋಜಕರಾಗಿ, ಸಮರ್ಥನ್ ಫೌಂಡೇಶನ್ ಟ್ರಸ್ಟಿ ಸ್ಥಾನದಲ್ಲಿ ಇದ್ದುಕೊಂಡು ಸಾಮಾಜಿಕವಾಗಿ ತೊಡಗಿಸಿಕೊಂಡರು. ಮಾತ್ರವಲ್ಲದೆ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲೂ ಚೌಟ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ. ಇದೀಗ ಚೌಟ ಅವರು ರಾಜ್ಯ ಬಿಜೆಪಿಯ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಯುವ ನಾಯಕರಾಗಿ ರಾಜ್ಯ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಲಿದ್ದಾರೆ.