ಫೈನಲ್ ಪ್ರವೇಶಿಸಲು ಕಾಂಗ್ರೆಸ್ ವಿಫಲ: ಪಂಚರಾಜ್ಯ ಫಲಿತಾಂಶದ ಬಗ್ಗೆ ನಳಿನ್ ವಿಶ್ಲೇಷಣೆ
ಫೈನಲ್ ಪ್ರವೇಶಿಸಲು ಕಾಂಗ್ರೆಸ್ ವಿಫಲ: ಪಂಚರಾಜ್ಯ ಫಲಿತಾಂಶದ ಬಗ್ಗೆ ನಳಿನ್ ವಿಶ್ಲೇಷಣೆ
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ದೇಶದ ಜನತೆ ವಿಶ್ವಾಸ ಇಟ್ಟಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಗೆಲುವಿಗೆ ಪ್ರತಿಕ್ರಿಯಿಸಿದ್ದಾರೆ.
ಪಂಚ ರಾಜ್ಯಗಳ ಚುನಾವಣೆ "ಸೆಮಿ ಫೈನಲ್" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ಕಾಂಗ್ರೆಸ್ ನಾಯಕರು ಹೇಳಿದ್ದರು. ಅವರೇ ಹೇಳಿದ ಪ್ರಕಾರ, ಕಾಂಗ್ರೆಸ್ ಫೈನಲ್ ಪ್ರವೇಶಿಸಲು ವಿಫಲವಾಗಿದೆ ಎನ್ನುವುದನ್ನು ಈ ಫಲಿತಾಂಶ ದೃಢಪಡಿಸಿದಂತಾಗಿದೆ ಎಂದು ವಿಶ್ಲೇಷಿಸಿದ ನಳಿನ್, ಯಾರು ಅಪಶಕುನ ಎನ್ನುವುದು ಈಗ ಕಾಂಗ್ರೆಸ್ ನಾಯಕರಿಗೆ ಅರಿವಾಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಜಯಭೇರಿ ಗಳಿಸಲು ಈ ಬಾರಿ ವಿಧಾನಸಭಾ ಚುನಾವಣಾ ಫಲಿತಾಂಶ ಹೆಚ್ಚಿನ ಶಕ್ತಿ ನೀಡಿದೆ. ವಿರೋಧ ಪಕ್ಷಗಳ ಅವಕಾಶವಾದಿ ಮೈತ್ರಿಯನ್ನು ಜನತೆ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಮೋದಿ ಅವರು ಮತ್ತೆ ಪ್ರಧಾನಿ ಆಗುವುದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ನಳಿನ್ ಹೇಳಿದ್ದಾರೆ.