ಶಿಕ್ಷಣೋದ್ಯಮಿ ಗಣೇಶ್ ರಾವ್ ಅವರ ಜಿ.ಆರ್. ವೈದ್ಯಕೀಯ ಕಾಲೇಜ್‌ನ ಮಾನ್ಯತೆ ನಕಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಪಷ್ಟನೆ
ಶಿಕ್ಷಣೋದ್ಯಮಿ ಗಣೇಶ್ ರಾವ್ ಅವರ ಜಿ.ಆರ್. ವೈದ್ಯಕೀಯ ಕಾಲೇಜ್‌ನ ಮಾನ್ಯತೆ ನಕಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಪಷ್ಟನೆ
ಮಂಗಳೂರಿನ ಕರಾವಳಿ ಕಾಲೇಜಿನ ಸಂಸ್ಥಾಪಕ, ಶಿಕ್ಷಣೋದ್ಯಮಿ ಗಣೇಶ್ ರಾವ್ ಅವರ ಜಿ.ಆರ್. ವೈದ್ಯಕೀಯ ಕಾಲೇಜ್‌ನ ಮಾನ್ಯತೆ ನಕಲಿ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಪಷ್ಟನೆ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಜಿ.ಆರ್. ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಎಂ.ಬಿ.ಬಿ.ಎಸ್. ಎರಡನೇ ಬ್ಯಾಚ್‌ಗೆ ಅನುಮತಿ ನವೀಕರಿಸಿಕೊಂಡಿದೆ ಎಂದು ಅದರ ಆಡಳಿತ ಮಂಡಳಿ ಹೇಳಿಕೊಂಡಿತ್ತು.
ಆದರೀಗ, ಅದೊಂದು ಫೇಕ್ ಸುದ್ದಿ. ಜಿ.ಆರ್. ವೈದ್ಯಕೀಯ ಕಾಲೇಜಿಗೆ ಮಾನ್ಯತೆ ಸಿಕ್ಕಿಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಪಷ್ಟನೆ ನೀಡಿದೆ.
ಈ ಸಂಬಂಧ ರಾಷ್ಟ್ರೀಯ ವೈದ್ಯಕೀಯ ಆಯೋಗವು ಸಾರ್ವಜನಿಕ ನೋಟೀಸ್ ಹೊರಡಿಸಿದ್ದು, ಕಾಲೇಜು ಮಾನ್ಯತೆ ಪತ್ರವನ್ನು ನಕಲು ಮಾಡಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಆಯೋಗದ ಮೌಲ್ಯಂಕನ ಮತ್ತು ಶ್ರೇಯಾಂಕ ಮಂಡಳಿ ಸೆಪ್ಟೆಂಬರ್ 13ರಂದು ಜಿ. ಆರ್. ವೈದ್ಯಕೀಯ ಕಾಲೇಜಿಗೆ ಮಾನ್ಯತೆ ನೀಡಿದೆ ಎಂದು ಕಾಲೇಜಿನ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಮಂಡಳಿ ಇಂತಹ ಯಾವುದೇ ಮಾನ್ಯತೆ ನೀಡಿಲ್ಲ. ಇದು ನಕಲಿಯಾಗಿದೆ. ಈ ರೀತಿ ನಕಲಿ ಪ್ರಮಾಣಪತ್ರ ಸೃಷ್ಟಿಸಿರುವ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್‌ನಲ್ಲಿ ವಿವರಿಸಲಾಗಿದೆ.
2021-22ನೇ ಸಾಲಿನಲ್ಲಿ 150 ಸೀಟುಗಳ ಭರ್ತಿಗೆ ಅವಕಾಶ ನೀಡಲಾಗಿತ್ತು. ಆದರೆ, ಮೂಲ ಸೌಕರ್ಯದ ಕೊರತೆಯ ಕಾರಣಕ್ಕೆ ಎರಡನೇ ಬ್ಯಾಚ್‌ಗೆ ಅನುಮತಿ ನೀಡುವ ಪ್ರಸ್ತಾಪವನ್ನು ಆಯೋಗ ತಿರಸ್ಕರಿಸಿತ್ತು.
ಅನುಮತಿ ನಿರಾಕರಿಸಿದ್ದರೂ ಕಾಲೇಜು ಅಕ್ರಮವಾಗಿ ಎರಡನೇ ಬ್ಯಾಚ್‌ಗೆ 150 ವಿದ್ಯಾರ್ಥಿಗಳನ್ನು ನೋಂದಣಿ ಮಾಡಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.