ಹೀರ್ಗಾನ : ನಿಂತಿದ್ದ ಬಸ್ಸಿಗೆ ಬೈಕ್ ಡಿಕ್ಕಿ :ಸವಾರ ಸ್ಥಳದಲ್ಲೇ ಸಾವು
Thursday, March 2, 2023
ಕಾರ್ಕಳ: ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಗೊರಟ್ಟಿ ಚರ್ಚ್ ಸಮೀಪದ ಅಮ್ಮಾಸ್ ಡಾಬಾ ಬಳಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಬೈಕ್ ಸವಾರ ಹಿರ್ಗಾನ ಗ್ರಾಮದ ಕಾನಂಗಿ ಹಂಕರಬೆಟ್ಟು ನಿವಾಸಿ ಮನೋಹರ ಪೂಜಾರಿ(43ವ) ಎಂದು ಗುರುತಿಸಲಾಗಿದೆ.
ಮನೋಹರ ಪೂಜಾರಿ ತನ್ನ ಬೈಕಿನಲ್ಲಿ ಬುಧವಾರ ಸಂಜೆ 7.30ರ ವೇಳೆಗೆ ಕಾರ್ಕಳ ಕಡೆಯಿಂದ ಹಿರ್ಗಾನ ಕಡೆಗೆ ಹೋಗುತ್ತಿದ್ದಾಗ ಅಜೆಕಾರು ಕಡೆಗೆ ಹೋಗುತ್ತಿದ್ದ ಬಸ್ಸಿಗೆ ವೇಗವಾಗಿ ಬಂದು ಹಿಂದಿನಿದ ಡಿಕ್ಕಿ ಹೊಡೆದ ಪರಿಣಾಮ ನಡೆದ ಭೀಕರ ಅಪಘಾತದಲ್ಲಿ ಮನೋಹರ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿದೇಶಕ್ಕೆ ಹೋಗಲು ಸಿದ್ಧತೆಯಲ್ಲಿದ್ದ ಮನೋಹರ:
ಮೃತ ಮನೋಹರ ಪೂಜಾರಿ ಇನ್ನು ಕೆಲವೇ ದಿನಗಳಲ್ಲಿ ವಿದೇಶಕ್ಕೆ ಹೋಗಲು ಸಿದ್ಧತೆ ನಡೆಸಿದ್ದು ಈ ಸಲುವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಫಿಟ್ಟೆಸ್ ಪ್ರಮಾಣಪತ್ರ ತರಲು ಕಾರ್ಕಳಕ್ಕೆ ಹೋಗಿ ವಾಪಾಸು ಮನೆಗೆ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಮನೋಹರ ಅವರ ಪತ್ನಿ ಅನಾರೋಗ್ಯಪೀಡಿತರಾಗಿದ್ದು ಅವರ ಚಿಕಿತ್ಸೆಗೆಂದು ಕಳೆದ 8 ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಇದೀಗ ಪತಿಯ ಸಾವಿನಿಂದ ಪತ್ನಿಗೆ ಬರಸಿಡಿಲು ಬಡಿದಂತಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.