ಮಂಗಳೂರು : ಕರಾವಳಿ ನಾಡಿನಲ್ಲಿ ಆಘಾತಕಾರಿ ಘಟನೆ - ಅವಳಿ ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ
Friday, March 31, 2023
ಮಂಗಳೂರು : ಕರಾವಳಿ ನಾಡಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅವಳಿ ಹೆಣ್ಣುಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದಾರುಣ ಘಟನೆ ನಗರದ ಕೆ.ಎಸ್.ರಾವ್ ರಸ್ತೆಯ ಕರುಣಾ ಲಾಡ್ಜ್‌ನಲ್ಲಿ ನಡೆದಿದೆ.
ಮೈಸೂರು ಮೂಲದ ದೇವೇಂದ್ರ(48), ಪತ್ನಿ ನಿರ್ಮಲಾ ಹಾಗೂ ಒಂಬತ್ತು ವರ್ಷದ ಇಬ್ಬರು ಅವಳಿ ಮಕ್ಕಳು ಚೈತನ್ಯಾ, ಚೈತ್ರಾ ಆತ್ಮಹತ್ಯೆ ಮಾಡಿಕೊಂಡವರು. ದೇವೇಂದ್ರ ಪತ್ನಿ ಹಾಗೂ ಪುತ್ರಿಯರಿಗೆ ವಿಷ ಪ್ರಾಷಣ ಮಾಡಿಸಿ, ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹಗಳ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರಲ್ಲಿ ದೇವೇಂದ್ರ ನೇಣುಬಿಗಿದ ಸ್ಥಿತಿಯಲ್ಲಿ ಹಾಗೂ ಪತ್ನಿ, ಪುತ್ರಿಯರು ಮಲಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರು ಮೂರು ದಿನಗಳಿಂದ ಈ ಲಾಡ್ಜ್‌ನಲ್ಲಿ ವಾಸ್ತವ್ಯವಿದ್ದಾರೆ. ಒಂದು ದಿನಕ್ಕೆ ಲಾಡ್ಜ್ ಬುಕ್ ಮಾಡಿದ್ದ ಅವರು ಆ ಬಳಿಕ ಎರಡು ದಿನಕ್ಕಾಗಿ ಮತ್ತೆ ವಿಸ್ತರಣೆ ಮಾಡಿದ್ದರು.
ನಿನ್ನೆ ಸಂಜೆ ರೂಂ ಚೆಕ್ ಔಟ್ ಮಾಡಬೇಕಿತ್ತು. ಆದರೆ, ಬಾಗಿಲು ತೆಗೆಯದೇ ಇದ್ದಾಗ ಅನುಮಾನಗೊಂಡು ತಪಾಸಣೆ ಮಾಡಿದಾಗ ವಿಚಾರ ಬಹಿರಂಗಗೊಂಡಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.