UDUPI ; ಸಾಹಿತಿ ಅಂಬಾತನಯ ಮುದ್ರಾಡಿ ವಿಧಿವಶ
Tuesday, February 21, 2023
ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳಿಗೆ ಪಾತ್ರರಾಗಿದ್ದ ಅಂಬಾತನಯ ಮುದ್ರಾಡಿ (88) ನಿಧನ ಹೊಂದಿದರು.
ಶಿಕ್ಷಕ, ಹರಿದಾಸ, ತಾಳಮದ್ದಲೆ ಅರ್ಥಧಾರಿ, ವೇಷಧಾರಿ,ಸಾಹಿತಿ ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ ಪೂರ್ಣವಾದ ಸಾಧನೆಯನ್ನು ಮಾಡಿದ ಕೀರ್ತಿ ಅಂಬಾತನಯ ಮುದ್ರಾಡಿ ಅವರದ್ದು. 1935ರ ಜೂನ್ 4ರಂದು ಕಾರ್ಕಳದ ಮುದ್ರಾಡಿಯಲ್ಲಿ ಜನಿಸಿದ ಅಂಬಾತನಯ ಮುದ್ರಾಡಿ ಅವರ ಮೂಲ ಹೆಸರು ಕೇಶವ ಶೆಟ್ಟಿಗಾರ್. ಎಂಟನೆಯ ತರಗತಿಯವರೆಗೆ ಶಾಲಾ ವಿದ್ಯಾಭ್ಯಾಸ ಪಡೆದಿದ್ದ ಅವರು ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಬೆಳೆದವರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದು ಅವರು ಇತ್ತೀಚೆಗೆ ನಡೆದ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ‘ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ’ ಪುಸ್ತಕವನ್ನು ಪ್ರಕಟಿಸಲಾಗಿತ್ತು. ಸಾಹಿತ್ಯ ಕೃಷಿಗಾಗಿ ಮುದ್ರಾಡಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳು ಪ್ರಾಪ್ತಿಯಾಗಿವೆ. ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ಬಳಗವನ್ನು ಅಗಲಿದ್ದಾರೆ. ಮಂಗಳವಾರ ಸಂಜೆ ಮುದ್ರಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.