
ತಾರಕಕ್ಕೇರಿದ IPS v/s IAS ಜಗಳ: ಸಿಎಂ ಗರಂ - ಇಬ್ಬರಿಗೂ ನೋಟಿಸ್ ನೀಡುವಂತೆ ಸೂಚನೆ : ಉತ್ತರ ಕೊಡಿ ರೂಪ ಅವರೇ ಎಂದು ರೋಹಿಣಿ ಅಭಿಮಾನಿಗಳಿಂದ ಪ್ರಶ್ನೆ
ಐಪಿಎಸ್ ಅಧಿಕಾರಿ ರೂಪಾ ಮತ್ತು ಐಎಎಸ್‌ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಆರೋಪ-ಪ್ರತ್ಯಾರೋಪಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಇಬ್ಬರು ಅಧಿಕಾರಿಗಳ ಕಿತ್ತಾಟ ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುವುದನ್ನು ಸಹಿಸುವುದಿಲ್ಲ, ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಮಾಧ್ಯಮಗಳ ಎದುರು ಚರ್ಚಿಸುವುದು ಸರಿಯಲ್ಲ. ಇವರಿಬ್ಬರ ಕಿತ್ತಾಟದಿಂದ ಸರ್ಕಾರಕ್ಕೆ ಮುಜಗರ ಉಂಟಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬೇಜವಾಬ್ದರಿಯಿಂದ ವರ್ತಿಸುವುದನ್ನು ಸಹಿಸಲ್ಲ. ಈ ಸಂಬಂಧ ಇಬ್ಬರಿಗೂ ನೊಟೀಸ್ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ದೇವ ಮಾನವರು ಅಂದುಕೊಂಡಿದ್ದಾರೆ. ಆದರೆ ಈ ಇಬ್ಬರು ಅಧಿಕಾರಿಗಳು ಬಹಳ ಕೆಟ್ಟದಾಗಿ ವರ್ತನೆ ಮಾಡುತ್ತಿದ್ದಾರೆ. ಇದರಿಂದ ನನಗೂ ನೋವಾಗಿದೆ. ವೈಯಕ್ತಿಕ ವಿಚಾರಗಳು ಏನೇ ಇದ್ದರೂ ಬೀದಿ ರಂಪಾಟ ಸಲ್ಲ. ಇವರಿಂದಾಗಿ ಎಲ್ಲ ಅಧಿಕಾರಿಗಳಿಗೂ ಮುಜುಗರ ಉಂಟಾಗುವಂತಾಗಿದೆ. ಮುಖ್ಯಮಂತ್ರಿಗಳು ಕಾನೂನಿನ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ರೂಪಾ ಮತ್ತು ರೋಹಿಣಿ ಸಿಂಧೂರಿ ನಡುವಣ ವಾಕ್ಸಮರ ಮತ್ತಷ್ಟು ತಾರಕಕ್ಕೇರಿದೆ. ರೋಹಿಣಿಗೆ ಮಾಧ್ಯಮದ ಮುಂದೆ ಬಂದು ಮಾತನಾಡಲು ಧೈರ್ಯ ಇಲ್ವಾ? ಅವರ ಪತಿ ಸುದ್ದಿಗೋಷ್ಠಿ ನಡೆಸುತ್ತಾರೆ ಅಂದರೆ ಏನರ್ಥ? ರೋಹಿಣಿಗೆ ಪ್ರಶ್ನೆಗಳನ್ನು ಎದುರಿಸಲು ಧೈರ್ಯ ಇಲ್ವಾ? ಉತ್ತರಗಳಿಲ್ವಾ? ರೋಹಿಣಿ ಸಿಂಧೂರಿ ಪತಿ ಮೊಬೈಲ್ ಹ್ಯಾಕ್ ಆಗಿದೆ ಅಂತ ಹೇಳುತ್ತಿದ್ದಾರೆ. ಇದು ನಂಬುವ ಮಾತೇ? ಏನೋ ಹೇಳಬೇಕು ಪಾಪ ಮಾನ ಹರಾಜಾಗಿದೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಫೇಸ್‌ಬುಕ್‌ನಲ್ಲಿ ಡಿ.ರೂಪಾ ಪೋಸ್ಟ್ ಮಾಡಿದ್ದಾರೆ.
ರೋಹಿಣಿ ಅಭಿಮಾನಿಗಳು ಫೇಸ್‌ಬುಕ್‌ನಲ್ಲಿ ಡಿ ರೂಪಾ ಅವರಿಗೆ 9 ಪ್ರಶ್ನೆಗಳನ್ನು ಕೇಳಿದ್ದಾರೆ. ರೋಹಿಣಿ ಸಿಂಧೂರಿಯ ಅಭಿಮಾನಿಗಳು ರೋಹಿಣಿ ಸಿಂಧೂರಿ ಆರ್ಗನೈಜೇಷನ್ ಫೇಸ್ಬುಕ್ ಖಾತೆ ಮೂಲಕ ಹ್ಯಾಷಟ್ಯಾಗ್ ಉತ್ತರ ಕೊಡಿ ರೂಪಾ ಅವರೇ ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.