ಹಿಂದುತ್ವ ಮುಂದಿಟ್ಟುಕೊಂಡು ಉಳ್ಳಾಲ ಕ್ಷೇತ್ರ ಗೆಲ್ಲುತ್ತೇವೆ : ಸಚಿವ ಸುನಿಲ್ ಕುಮಾರ್
Friday, February 3, 2023
ಉಳ್ಳಾಲ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಹಾಗೂ ಹಿಂದುತ್ವವನ್ನು ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯಲ್ಲಿ ಉಲ್ಲಾಳ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವುದರೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಇಂಧನ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಬಿ ಸುನಿಲ್ ಕುಮಾರ್ ಹೇಳಿದರು.
ಅವರು ಬಿಜೆಪಿ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಬುಧವಾರ ಉಳ್ಳಾಲದ ವಿವಿಧ ಬೂತ್ ಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಅಭಿಯಾನದ ಮೂಲಕ ಒಗ್ಗಟ್ಟಿನ ಮಂತ್ರ ಅಭಿವೃದ್ಧಿ ಹಿಂದುತ್ವ ಮುಂದಿಟ್ಟುಕೊಂಡು ಉಳ್ಳಾಲ ಕ್ಷೇತ್ರವನ್ನು ಗೆಲ್ಲಲು ಎಲ್ಲಾ ತಂತ್ರಗಾರಿಕೆಯನ್ನು ರೂಪಿಸಲಾಗಿದೆ ಎಂದರು. ಬೆಳಿಗ್ಗೆಯಿಂದಲೇ ವಿವಿಧ ದೇವಸ್ಥಾನ, ದೈವಸ್ಥಾನ ಗಳಿಗೆ ಭೇಟಿ ನೀಡಿದ ಸಚಿವರು ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ,ಮನೆಮನೆಗಳಿಗೆ ಭೇಟಿ ನೀಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳ ಕರಪತ್ರಗಳನ್ನು ಹಂಚಿ ಗೋಡೆಗಳಿಗೆ ವಿಜಯ ಸಂಕಲ್ಪ ಅಭಿಯಾನದ ಸ್ಟಿಕ್ಕರ್ ಗಳನ್ನು ಅಂಟಿಸಿದರು.
ಈ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಚಿವರಿಗೆ ಅಹವಾಲುಗಳನ್ನು ಸಲ್ಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಉಪಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಮೊದಲಾದವರು ಉಪಸ್ಥಿತರಿದ್ದರು.