
ಬೆಳ್ತಂಗಡಿ ಬಳಿ ಕಾರು - ಬಸ್ ನಡುವೆ ಅಪಘಾತ- ಧಾರ್ಮಿಕ ಮುಖಂಡ ಸಹಿತ ಇಬ್ಬರು ಸಾವು
Sunday, January 1, 2023
ಬೆಳ್ತಂಗಡಿ: ಹೊಸ ವರ್ಷದ ಮೊದಲ ದಿನವೆ ನಡೆದ ರಸ್ತೆ ಅಪಘಾತದಲ್ಲಿ ಧಾರ್ಮಿಕ ಮುಖಂಡ ಸಹಿತ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಧಾರ್ಮಿಕ ಮುಖಂಡ ನೌಶಾದ್ ಹಾಜಿ ಸೂರಲ್ಪಾಡಿ(44) ಮತ್ತು ಕಾರು ಚಾಲಕ, ಉಳಾಯಿಬೆಟ್ಟು ನಿವಾಸಿ ಮುಷರಫ್ ಸಾವನ್ನಪ್ಪಿದವರು.
ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ ಸಮೀಪ ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕಾರು ಹಾಗೂ ಬಸ್ಸು ಮುಖಾಮುಖಿ ಢಿಕ್ಕಿ ಹೊಡೆದಿದ್ದು ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿಯಾಗಿದ್ದ ನೌಶಾದ್ ಹಾಜಿ ಸೂರಲ್ಪಾಡಿಯವರು ಇದೀಗ ಗಂಜಿಮಠದ ಸೂರಲ್ಪಾಡಿಯಲ್ಲಿ ನೆಲೆಸಿದ್ದಾರೆ. ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷರಾಗಿದ್ದ ಅವರು ನಂಡೆ ಪೆಂಙಳ್ ಅಭಿಯಾನದ ಸ್ಥಾಪಕ ಅಧ್ಯಕ್ಷರಾಗಿದ್ದರು. ಬೆಳ್ತಂಗಡಿಯ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಕೋಶಾಧಿಕಾರಿಯಾಗಿ, ಮೂಡುಬಿದಿರೆ ಕಾಶಿಪಟ್ಣದ ದಾರುನ್ನೂರ್ ಎಜ್ಯುಕೇಶನ್ ಸೆಂಟರ್ ಕಾರ್ಯದರ್ಶಿಯಾಗಿ, ಗುರುಪುರ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ವಿವಿಧ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅಪಘಾತಕ್ಕೆ ಬಲಿಯಾದ ಕಾರು ಚಾಲಕ ಮುಷರಫ್ ಉಳಾಯಿಬೆಟ್ಟು ನಿವಾಸಿಯಾಗಿದ್ದಾರೆ.