ಭೀಕರ ಅಪಘಾತ- 12 ಕಿ.ಮೀ 20 ವರ್ಷದ ಯುವತಿಯನ್ನು ಎಳೆದೊಯ್ದ ಕಾರು, ಯುವತಿ ಸಾವು
ದೆಹಲಿ: ಯುವತಿಯೊಬ್ಬಳ ಸ್ಕೂಟರ್ ಅಪಘಾತವಾಗಿ, ಆಕೆಯನ್ನು ಕಾರು 12 ಕಿ.ಮೀವರೆಗೂ ಎಳೆದೊಯ್ದಿದ್ದು, ಪರಿಣಾಮ ಯುವತಿ ಮೃತಪಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ.
ಅಮನ್ ವಿಹಾರ್ ನಿವಾಸಿ ಅಂಜಲಿ (20) ಎಂಬಾಕೆ ಮೃತ ಯುವತಿ. ದೆಹಲಿಯ ಸುಲ್ತಾನ್‍ಪುರಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಅಂಜಲಿ ಚಲಿಸುತ್ತಿದ್ದ ಸ್ಕೂಟಿಯು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ನಡೆದಿದೆ. ಈ ವೇಳೆ ಕಾರಿನ ಚಕ್ರಕ್ಕೆ ಆಕೆ ಸಿಲುಕಿಕೊಂಡಿದ್ದಾರೆ. ಆದರೂ ಕಾರು 10-12 ಕಿ.ಮೀ ಕ್ರಮಿಸಿ ಸಾಗಿದೆ.
ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕಾರೊಂದು ಶವವನ್ನು ಎಳೆದುಕೊಂಡು ಹೋಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದಾದ ಒಂದು ಗಂಟೆಯ ನಂತರ ರಸ್ತೆಯಲ್ಲಿ ಮಹಿಳೆಯ ಮೃತದೇಹ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮತ್ತೊಂದು ಕರೆ ಬಂದಿದೆ. ಅದಾದ ಬಳಿಕ ಪೊಲೀಸರು ಸ್ಥಳಕ್ಕೆ ನೀಡಿ ಪರಿಶೀಲನೆ ನಡೆಸಿದ್ದು, ವಾಹನಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ನೋಂದಾಯಿತ ಕಾರಿನ ಸಂಖ್ಯೆಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಘಟನೆಗೆ ಸಂಬಂಧಿಸಿ ಮಾರುತಿ ಸುಜುಕಿ ಬಲೆನೊ ಕಾರಿನಲ್ಲಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಕುರಿತು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಕಾರು ಸ್ಕೂಟಿಗೆ ಡಿಕ್ಕಿಯಾಗಿದೆ ಎಂಬುದನ್ನು ತಿಳಿಸಿದ್ದಾರೆ. ಆದರೆ ಹಲವಾರು ಕಿ.ಮೀಗಳವರೆಗೂ ಕ್ರಮಿಸಿದರೂ ಕಾರಿನ ಕೆಳಗೆ ಮಹಿಳೆ ಶವ ಇದೆ ಎನ್ನವುದು ತಮಗೆ ತಿಳಿದಿರಲಿಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕಾರಿನಲ್ಲಿದ್ದ ಆರೋಪಿಗಳು ಕುಡಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.