UDUPI : ಉಡುಪಿಯಲ್ಲಿ ನಡೆಯಿತು ಅಪರೂಪದ ಮದುವೆ .. ಯಾಕೆ ಅಪರೂಪ ಗೊತ್ತಾ..?
Saturday, October 29, 2022
ಉಡುಪಿ ನಗರ ಅಪರೂಪದ ಮದುವೆಗೆ ಸಾಕ್ಷಿಯಾಯ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಮದುವೆಯ ಪೌರೋಹಿತ್ಯ ವಹಿಸಿಕೊಂಡಿತು. ಮದುವೆ ನಡೆದದ್ದು ಉಡುಪಿಯ ರಾಜ್ಯ ಮಹಿಳಾ ನಿಲಯದಲ್ಲಿ. ಜಯಶ್ರೀ ( 25) ಇಲ್ಲಿನ ಸ್ಟೇಟ್ ಹೋಮ್ ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಿದ್ದರು.
ಕೌಟುಂಬಿಕ ಸಮಸ್ಯೆ ಕಾರಣ, ಈಕೆ ಸ್ಟೇಟ್ ಹೋಮ್ ಗೆ ಬಂದಿದ್ದಳು. ಇಲ್ಲಿ ನಾಲ್ಕು ವರ್ಷಗಳಲ್ಲಿ ವಿವಿಧ ಕೌಶಲ್ಯ ಮತ್ತು ತರಬೇತಿ ಕಲಿತ ಬಳಿಕ ಸಮಾಜದ ಮುಖ್ಯವಾಹಿನಿಗೆ ಬರುವ ಮನಸಾಗಿದೆ. ಈಕೆಗೆ ಹಲವು ಪ್ರಪೋಷಲ್‌ಗಳು ಬಂದಿದ್ದವು. ಮಹಿಳಾ ನಿಲಯದವರು ಒಂದು ಸಮಿತಿ ರಚಿಸಿ ಸೂಕ್ತ ವರನನ್ನು ಹುಡುಕಿತು.ವರನ ಹಿನ್ನೆಲೆ ಮತ್ತು ಪೂರ್ವಾಪರ ಅರಿತು ,ದಾವಣಗೆರೆಯ ಮಲ್ಲೇಶ್( 29) ಜೊತೆ ವಿವಾಹಕ್ಕೆ ವ್ಯವಸ್ತೆ ಮಾಡಿತು.ಇವತ್ತು ಇವರಿಬ್ಬರು ಜಿಲ್ಲಾಧಿಕಾರಿ ಕೂರ್ಮಾ ರಾವ್ ,ಶಾಸಕ ರಘುಪತಿ ಭಟ್ ಮತ್ತು ಸೀಮಿತ ಬಂಧುಗಳ ಸಮ್ಮುಖದಲ್ಲಿ ಸತಿ ಪತಿಗಳಾದರು. ವಧುವಿಗೆ ಸರಕಾರದ ಕಡೆಯಿಂದ 15 ಸಾವಿರ ಮತ್ತು ದಾನಿಗಳ ನೆರವಿನಿಂದ 50 ಸಾವಿರದಷ್ಟು ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇರಿಸಲಾಗಿದೆ. ಕೃಷಿಕನಾಗಿರುವ ಮಲ್ಲೇಶ್ ಮತ್ತು ಜಯಶ್ರೀ ದಾಂಪತ್ಯ ಸುಖಕರವಾಗಿರಲಿ ಎಂದು ಮದುವೆಗೆ ಬಂದವರು ಹಾರೈಸಿದರು.