UDUPI : ದುರ್ಗಾದೌಡ್ ಮೆರವಣಿಗೆ ; ಎರಡು ಪ್ರತ್ಯೇಕ ಪ್ರಕರಣ ದಾಖಲು
Friday, October 14, 2022
ಉಡುಪಿ ನಗರದಲ್ಲಿ ಇತ್ತೀಚೆಗೆ ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ ಮತ್ತು ಸಾರ್ವಜನಿಕ ಸಭೆಯ ಪ್ರಚೋದನಕಾರಿ ಭಾಷಣದ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಅಕ್ಟೋಬರ್ 2ರಂದು, ಮಧ್ಯಾಹ್ನ ನಂತರ ಕಡಿಯಾಳಿಯಿಂದ ಹೊರಟು ಉಡುಪಿ ನಗರದಲ್ಲಿ ಸಾಗಿದ ದುರ್ಗಾ ದೌಡ್ ಮೆರವಣಿಗೆಯಲ್ಲಿ ಸುಮಾರು 10-15 ಮಂದಿಯ ಗುಂಪು ಮಾರಕಾಸ್ತ್ರವಾದ ತಲವಾರು ಪ್ರದರ್ಶಿಸಿದ್ದು, ಹಾಗೂ ಮೆರವಣಿಗೆಯಲ್ಲಿ ತಲವಾರು ಹಿಡಿದು ತಾಲೀಮು ನಡೆಸಿ ಭಯ ಹುಟ್ಟಿಸಿದ್ದಾರೆ ಅಂತ ಹುಸೈನ್ ನೀಡಿರುವ ದೂರಿನಂತೆ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ದುರ್ಗಾ ದೌಡ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ಕಾಜಲ್ ಹಿಂದೂಸ್ಥಾನಿ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ದೂರಲಾಗಿದೆ.