ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಯುವತಿಯ ಅತ್ಯಾಚಾರ : 20 ವರ್ಷ ಜೈಲು ಶಿಕ್ಷೆ ಪ್ರಕಟ
Thursday, October 6, 2022
ದಾವಣಗೆರೆ : ಅಪ್ರಾಪ್ತ ವಯಸ್ಥ ಬಾಲಕಿಯನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಆರೋಪಿಗೆ ದಾವಣಗೆರೆಯ ವಿಶೇಷ ಪೋಕ್ಲೋ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಚನ್ನಗಿರಿ ತಾಲೂಕಿನ ಸಿದ್ದನಮಠದ ಚಂದ್ರಪ್ಪ ಶಿಕ್ಷೆಗೊಳಗಾದ ಆರೋಪಿ ಯಾಗಿದ್ದು, ಈತನಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ರೂ 30 ಸಾವಿರ ದಂಡವನ್ನು, ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ 5 ಲಕ್ಷ ರೂ . ನೀಡುವಂತೆ ತೀರ್ಪು ನೀಡಲಾಗಿದೆ .
ಅಡಕೆ ಸುಲಿಯುವ ಕೆಲಸಕ್ಕೆ ಹೋಗುತ್ತಿದ್ದ ಅಪ್ರಾಪ್ತ ವಯಸ್ಕ ಯುವತಿಯನ್ನು ಪರಿಚಯ ಮಾಡಿಕೊಂಡ ಚಂದ್ರಪ್ಪ ಪ್ರೀತಿಸುವುದಾಗಿ ಪೀಡಿಸಿ ಮದುವೆ ಆಗುವುದಾಗಿ ನಂಬಿಸಿದ್ದ ಬಳಿಕ ಪುಸಲಾಯಿಸಿ ಅತ್ಯಾಚಾರ ನಡೆಸಿದ್ದನು. ಈ ಬಗ್ಗೆ ಸಂತ್ರಸ್ತೆಯ ತಾಯಿ 2020 ರಲ್ಲಿ ಸಂತೇಬೆನ್ನೂರು ಠಾಣೆಯಲ್ಲಿ ದೂರು ಸಲ್ಲಿಸಿದ್ದರು . ಜಿಲ್ಲಾ ಮತ್ತು ಸತ್ರ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಎನ್ . ಶ್ರೀಪಾದ್ ಅವರು , ಆರೋಪಿಗೆ 20 ವರ್ಷ ಜೈಲು ಶಿಕ್ಷೆ , 30 ಸಾವಿರ ರೂ . ದಂಡ ವಿಧಿಸಿದ್ದಾರೆ .
ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ 5 ಲಕ್ಷ ರೂ . ನೀಡಬೇಕು ಎಂದು ದಾವಣಗೆರೆ ಜಿಲ್ಲಾ ಉಚಿತ ಸೇವಾ ಕಾನೂನು ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ . ಅಭಿಯೋಜನೆ ಪರ ವಿಶೇಷ ಸರಕಾರಿ ಅಭಿಯೋಜಕಿ ರೇಖಾ ಎಸ್ . ಕೋಟೆಗೌಡರ್ ವಾದ ಮಂಡಿಸಿದ್ದರು .