
UDUPI : ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಮೃತ ದೇಹ ಪತ್ತೆ
ಕೇರಳದ ತಿರುವನಂತಪುರದ ತೀರ್ಥಯಾತ್ರೆಗೆ ಅಂತ ಕೊಲ್ಲೂರಿಗೆ ಬಂದು, ಇಲ್ಲಿನ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋದ ಚಾಂದಿ ಶೇಖರನ್ ಅವರ ಮೃತ ದೇಹ ಇಂದು ಪತ್ತೆಯಾಗಿದೆ.
ಮೂಕಾಂಬಿಕಾ ದೇಗುಲಕ್ಕೆ ಸೆ. 10ರಂದು ಆಗಮಿಸಿ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿದ್ದ ತಿರುವನಂತಪುರದ ಮುರುಗನ್ ಅವರ ಪತ್ನಿ ಶಾಂತಿ ಶೇಖರನ್ (42) ಅವರ ಮೃತದೇಹ ಸೆ. 11ರ ಸಂಜೆ ಅನತಿ ದೂರದಲ್ಲಿ ಪತ್ತೆಯಾಗಿದೆ. ಕೊಲ್ಲೂರು ಕ್ಷೇತ್ರ ದರ್ಶನಕ್ಕೆ ಕೇರಳದ 14 ಮಂದಿಯ ತಂಡ ಆಗಮಿಸಿತ್ತು. ಅವರು ಸೌಪರ್ಣಿಕಾ ಸ್ನಾನಘಟ್ಟಕ್ಕೆ ತೆರಳಿ ತೀರ್ಥ ಸ್ನಾನಕ್ಕೆಂದು ಸೌಪರ್ಣಿಕಾ ನದಿಗೆ ಇಳಿದಿದ್ದರು. ಶಾಂತಿ ಶೇಖರನ್ ಅವರು ಪುತ್ರ ಆದಿತ್ಯ ನದಿಯ ಸೆಳೆತಕ್ಕೆ ಒಳಗಾಗಿ ನೀರು ಪಾಲಾಗುತ್ತಿರುವುದನ್ನು ಕಂಡು ಆತನನ್ನು ರಕ್ಷಿಸಲು ನೀರಿಗೆ ಧುಮುಕಿದ್ದರು ಎನ್ನಲಾಗಿದೆ. ಆಕೆಯ ಪತಿ ಮುರುಗನ್ ಕೂಡ ಪುತ್ರನನ್ನು ಕಾಪಾಡಲು ನೀರಿಗೆ ಹಾರಿದ್ದರು. ಆದಿತ್ಯ ಹಾಗೂ ತಂದೆ ಮುರುಗನ್ ಈಜಿ ದಡ ಸೇರಿದರೆ ಶಾಂತಿ ಶೇಖರನ್ ಮೇಲೆ ಬರಲಾಗದೇ ನೀರಿನ ಸೆಳೆತಕ್ಕೆ ಸಿಲುಕಿ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಅಗ್ನಿಶಾಮಕ ದಳ, ಪೊಲೀಸರು ಹಾಗೂ ಈಶ್ವರ ಮಲ್ಪೆ ಶೋಧ ಕಾರ್ಯ ನಡೆಸಿದ್ದು, ಸೌಪರ್ಣಿಕಾ ನದಿಯ 1 ಕಿ.ಮೀ. ದೂರ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ.