
ಬೆಂಗಳೂರು: ಕೇರ್ ಟೇಕರ್ ಆಗಿದ್ದಾಕೆ ಮನೆಯನ್ನೇ ದೋಚಿದ ಕಳ್ಳಿ ಪೊಲೀಸ್ ಬಲೆಗೆ
ಬೆಂಗಳೂರು: ಕೆಲಸದ ಒತ್ತಡದ ನಡುವೆ ಮನೆಯಲ್ಲಿರುವ ಹಿರಿಯರು, ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳಲು ಸಮಯವೇ ಸಾಲುದಿಲ್ಲ. ಆದ್ದರಿಂದ ಅವರುಗಳ ಯೋಗಕ್ಷೇಮ ನೋಡಿಕೊಳ್ಳಲು ಯಾರಾದರು ಕೇರ್ ಟೇಕರ್ ಒಬ್ಬರನ್ನು ನೇಮಿಸಿಕೊಳ್ಳುತ್ತಾರೆ. ಇದೀಗ ಕೇರ್ ಟೇಕರ್ ಆಗಿರುವಾಕೆಯೇ ಮನೆಯನ್ನೇ ದೋಚಿರುವ ಪ್ರಕರಣವೊಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅಪರ್ಣಾ ಎಂಬುವರು ಮನೆಯಲ್ಲಿ ತಂದೆಯನ್ನು ನೋಡಿಕೊಳ್ಳಲು ಉಮಾದೇವಿ ಎಂಬ ಕೇರ್ ಟೇಕರ್ ಒಬ್ಬರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಆಕೆ ಆ ಹಿರಿಯರನ್ನು ಕೇರ್ ಮಾಡುವೆ ಎಂದು ಕೆಲಸ ಗಿಟ್ಟಿಸಿಕೊಂಡು, ಮನೆಯಲ್ಲಿದ್ದ ಹಣ , ಚಿನ್ನ ಹಾಗೂ ಬೆಳ್ಳಿಯ ಸಾಮಾಗ್ರಿಗಳ ಕಳವು ಮಾಡಿ ಪರಾರಿಯಾಗಿದ್ದಳು.
ಈ ಬಗ್ಗೆ ಅಪರ್ಣಾ ಅವರು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತೆಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿ ಉಮಾದೇವಿಯಿಂದ ಪೊಲೀಸರು 15 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ವಶಪಡಿಸಿದ್ದಾರೆ.