ಸುಳ್ಯ: ವಾಟ್ಸಪ್ ಗ್ರೂಪಿನಲ್ಲಿ ಪರಿಚಯವಾದ ಅಪ್ರಾಪ್ತ ಯುವತಿಯ ಅತ್ಯಾಚಾರ
ಸುಳ್ಯ: ವಾಟ್ಸ್ಆ್ಯಪ್ ಗ್ರೂಪಲ್ಲಿ ಪರಿಚಯವಾದ ವಿದ್ಯಾರ್ಥಿನಿಯನ್ನು ತನ್ನ ಸ್ನೇಹಿತನ ಮನೆಗೆ ಕರೆದೊಯ್ದು ಲೈಂಗಿಕ ಸಂಪರ್ಕ ಬೆಳೆಸಿರುವ ಯುವಕನೋರ್ವನು ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದಾನೆಂದು ಸುಳ್ಯ ಠಾಣೆಯಲ್ಲಿ ಆತನ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿದೆ.
ಉಬರಡ್ಕ ನಿವಾಸಿ ತೀರ್ಥಪ್ರಸಾದ್ (25) ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪಿ.
ಸುಳ್ಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆಗಾಗ ತನಗೆ ಹೊಟ್ಟೆನೋವು ಆಗುತ್ತಿದೆ ಎಂದು ಮನೆಯವರಲ್ಲಿ ಹೇಳುತ್ತಿದ್ದಳು. ಇದರಿಂದ ಆಕೆಯ ಹೆತ್ತವರು ಇಂದು ವೈದ್ಯರಲ್ಲಿ ತಪಾಸಣೆ ನಡೆಸಿದಾಗ ವಿದ್ಯಾರ್ಥಿನಿ ಗರ್ಭಿಣಿ ಎಂಬುದು ತಿಳಿದುಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ತೀರ್ಥಪ್ರಸಾದ್ (25) ಎಂಬಾತ ನಾಲ್ಕು ತಿಂಗಳ ಹಿಂದೆ ತನ್ನನ್ನು ಕಾಲೇಜು ಬಳಿ ಇರುವ ಆತನ ಸ್ನೇಹಿತನ ರೂಮಿಗೆ ಕರೆದೊಯ್ದು ಲೈಂಗಿಕ ಸಂಪರ್ಕ ಬೆಳೆಸಿರುವ ವಿಚಾರ ತಿಳಿಸಿದ್ದಾಳೆ.
ಈ ಬಗ್ಗೆ ವಿದ್ಯಾರ್ಥಿನಿಯ ತಂದೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯುವಕನ ವಿರುದ್ಧ 376 ಐಪಿಸಿ ಮತ್ತು ಪೊಕ್ಸೊ ಪ್ರಕರಣ ದಾಖಲಾಗಿದೆ.