
ಮಂಗಳೂರು: ಪಿಎಫ್ಐ ಬ್ಯಾನ್ ಬೆನ್ನಲ್ಲೇ ಕಚೇರಿಗೆ ಬೀಗ ಜಡಿದ ಪೊಲೀಸರು
ಮಂಗಳೂರು: ಪಿಎಫ್ಐ ಬ್ಯಾನ್ ಮಾಡಿರುವ ಬೆನ್ನಲ್ಲೇ ಕಚೇರಿಗೆ ಬೀಗ ಜಡಿಯಲು ಆದೇಶವಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದ ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿಗೆ ಬೀಗಮುದ್ರೆ ಹಾಕಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಮಂಗಳೂರು ಪೊಲೀಸರು ಪಿಎಫ್ಐ ಕಚೇರಿಗೆ ಬೀಗ ಜಡಿದಿದ್ದಾರೆ. ಕಚೇರಿಯ ಮುಂಭಾಗಕ್ಕೆ ಬೀಗ ಹಾಕಿರುವ ಹಿನ್ನೆಲೆಯಲ್ಲಿ ಕಬ್ಬಿಣದ ಕಟ್ಟರ್ ಮೂಲಕ ಬೀಗ ಒಡೆದು ಪೊಲೀಸರು ಪಿಎಫ್ಐ ಕಚೇರಿಗೆ ನುಗ್ಗಿದ್ದಾರೆ. ಕಳೆದ ಎರಡು ದಿನಗಳಿಂದ ಬೀಗ ಹಾಕಿರುವ ಪಿಎಫ್ಐ ಕಚೇರಿಯ ಬೀಗ ಒಡೆದು ಪೊಲೀಸರು ತಪಾಸಣೆ ನಡೆಸಿದ್ದಾರೆ. ಬಳಿಕ ಪಿಎಫ್ಐ ಕಚೇರಿಗೆ ಬೀಗ ಜಡಿದು ಸೀಲ್ ಹಾಕಿ ಸೀಝ್ ಮಾಡಿದ್ದಾರೆ.
ಬಳಿಕ ಸ್ಥಳಕ್ಕಾಗಮಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಪರಿಶೀಲನೆ ನಡೆಸಿ, ಮಾತನಾಡಿದ ಅವರು, ಕೇಂದ್ರ ಸರ್ಕಾರ ಪಿಎಫ್ಐ ಹಾಗೂ ಸಹ ಸಂಘಟನೆಗಳನ್ನು ಬ್ಯಾನ್ ಮಾಡಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಸರ್ಕಾರ ಬ್ಯಾನ್ ಮಾಡಿರುವ ಸಂಘಟನೆಗಳ ಕಚೇರಿಗಳನ್ನು ಸೀಝ್ ಮಾಡಲು ಸೂಚನೆ ನೀಡಿತ್ತು. ಮಂಗಳೂರು ನಗರದ ಮೂರು ಉಪವಿಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದರು.
ಪಿಎಫ್ಐ ಕಚೇರಿಯಲ್ಲಿನ ವಸ್ತುಗಳನ್ನು ಸೀಜ್ ಮಾಡಿ, ಕಚೇರಿಗೆ ಸೀಲ್ ಹಾಕಲಾಗಿದೆ. ಪಿಎಫ್ಐ ಸಂಘಟನೆ ಹಾಗೂ ಅದರ ಸಹಸಂಘಟನೆಗಳ ಕಚೇರಿಗಳಲ್ಲಿ ಅಗತ್ಯ ದಾಖಲೆಗಳನ್ನು ಸೀಜ್ ಮಾಡಲಾಗಿದೆ ಎಂದರು.