ಧರ್ಮಸ್ಥಳದ ಕಾಡಿನಲ್ಲಿ ವೀಡಿಯೋ ಚಿತ್ರೀಕರಿಸಿ ವಿಷ ಸೇವಿಸಿ ಹಾಸನದ ಯುವಕ
ಬೆಳ್ತಂಗಡಿ: ಯುವಕನೋರ್ವನು ಕಾಡಿನಲ್ಲಿ ವಿಷ ಸೇವನೆ ಮಾಡುತ್ತ ವೀಡಿಯೋ ಚಿತ್ರೀಕರಿಸಿ ಅದನ್ನು ಕುಟುಂಬದವರಿಗೆ ಕಳುಹಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ದೌಢಾಯಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ರಾಮನಾಥಪುರ ಮೂಲದ ಸುನಿಲ್ (28) ವಿಷ ಸೇವಿಸಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವವರು.
ಬೈಕ್ ನಲ್ಲಿ ಬುಧವಾರ ಹಾಸನದಿಂದ ಬೆಳಗ್ಗೆ ಧರ್ಮಸ್ಥಳಕ್ಕೆ ಬಂದಿದ್ದ ಅವರು ದೇವರ ದರ್ಶನ ಮುಗಿಸಿ ಮಧ್ಯಾಹ್ನದ ಬಳಿಕ ಮಹಾತ್ಮ ಗಾಂಧಿ ವೃತ್ತದ ಪಕ್ಕದ ಗುಡ್ಡಕ್ಕೆ ಹೋಗಿದ್ದಾರೆ. ಅಲ್ಲಿಯೇ ಕುಳಿತು ಅವರು ವಿಷ ಸೇವಿಸಿ ತನ್ನ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಅದನ್ನು ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಕಳುಹಿಸಿದ್ದರು.
ತಕ್ಷಣ ಅವರ ಕುಟುಂಬದವರು ಮತ್ತು ಸ್ನೇಹಿತರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ಸಿಬ್ಬಂದಿ ಕಾಡಿನನಲ್ಲಿ ಸುನಿಲ್ ರನ್ನು ಹುಡುಕಾಟ ನಡೆಸಿದಾಗ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ಅವರು ಪತ್ತೆ ಮಾಡಿದ್ದರು. ಉಜಿರೆ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸುನಿಲ್ ಅವರು ತಮ್ಮ ಊರಿನಲ್ಲಿ ಪಾದರಕ್ಷೆಯ ಮಳಿಗೆಯನ್ನು ಹೊಂದಿದ್ದಾರೆ. ಅವರಿಗೆ ವಿವಾಹವಾಗಿ ಮೂರು ತಿಂಗಳ ಮಗು ಕೂಡ ಇದೆ. ಆದರೆ ದಂಪತಿ ನಡುವೆ ಉಂಟಾದ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನಿಸಿ ದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.