ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ವೈದ್ಯ ಹಾಗೂ ಮಕ್ಕಳಿಬ್ಬರು ದುರಂತ ಸಾವು
Sunday, September 25, 2022
ರೇಣಿಗುಂಟ (ಆಂಧ್ರಪ್ರದೇಶ): ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ ವೈದ್ಯ ಹಾಗೂ ಅವರ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ದುರ್ಘಟನೆ ತಿರುಪತಿ ಜಿಲ್ಲೆಯ ರೇಣಿಗುಂಟದಲ್ಲಿ ನಡೆದಿದೆ.
ವೈದ್ಯ ಡಾ.ರವಿಶಂಕರ ರೆಡ್ಡಿ (47), ಅವರ ಪುತ್ರ ಸಿದ್ಧಾರ್ಥ ರೆಡ್ಡಿ (12) ಪುತ್ರಿ ಕಾರ್ತಿಕಾ (8) ಮೃತಪಟ್ಟ ದುರ್ದೈವಿಗಳು.
ರೇಣಿಗುಂಟದ ಪಟ್ಟಣದ ಭಗತ್ ಸಿಂಗ್ ಕಾಲನಿಯಲ್ಲಿ ಡಾ.ರವಿಶಂಕರ ರೆಡ್ಡಿಯವರು ಆಸ್ಪತ್ರೆಯೊಂದನ್ನು ನಡೆಸುತ್ತಿದ್ದರು. ಡಾ.ರವಿಶಂಕರರೆಡಿ ಮತ್ತು ಡಾ.ಅನಂತಲಕ್ಷ್ಮೀ ವೈದ್ಯ ದಂಪತಿಯು ಮಕ್ಕಳೊಂದಿಗೆ ಆಸ್ಪತ್ರೆಯ ಕಟ್ಟಡದ ಮೇಲಿನ ಮಹಡಿಯಲ್ಲಿ ವಾಸವಿತ್ತು. ಆದರೆ ರವಿವಾರ ಬೆಳಗ್ಗಿನ ಜಾವ ಸಂಭವಿಸಿರುವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಟ್ಟಡದಲ್ಲಿ ಬೆಂಕಿ ಅವಘಡ ಉಂಟಾಗಿದೆ.
ಆದ್ದರಿಂದ ಮನೆಯಲ್ಲಿದ್ದ ಮಕ್ಕಳನ್ನು ರಕ್ಷಿಸಲು ಹೋಗಿರುವ ವೈದ್ಯ ಸಜೀವವಾಗಿ ದಹನಗೊಂಡಿದ್ದಾರೆ. ಮಕ್ಕಳಿಗೆ ಸುಟ್ಟ ಗಾಯವಾಗಿಲ್ಲದಿದ್ದರೂ, ಕಾರ್ಬನ್ ಮಾನಾಕ್ಸೆಡ್ ಪರಿಣಾಮ ಮಕ್ಕಳೂ ದುರಂತ ಅಂತ್ಯ ಕಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು , ರವಿಶಂಕರ್ ರೆಡ್ಡಿ ಅವರ ತಾಯಿ ಮತ್ತು ಪತ್ನಿಯನ್ನು ರಕ್ಷಿಸಿದ್ದಾರೆ. ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಅತ್ತೆ - ಸೊಸೆಯನ್ನಿ ತಿರುಪತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.