ಹೆಣ್ಣಿನ ಚಿಂತನೆಯನ್ನು ಗೌರವಿಸಿದಾಗ ಪರಿಶುದ್ಧ ಸಮಾಜದ ನಿರ್ಮಾಣ ಸಾಧ್ಯ: ಡಾ.ಜ್ಯೋತಿ ಚೇಳ್ಯಾರ್
ಮೂಡುಬಿದಿರೆ: ಹೆಣ್ಣು ಹೆಣ್ಣನ್ನು ಅರ್ಥೈಸಿಕೊಳ್ಳುವುದು ಅವಳ ಪ್ರಾಥಮಿಕ ಶಿಕ್ಷಣದ ಮೊದಲ ಹೆಜ್ಜೆಯಾಗಿರಬೇಕು. ಹೆಣ್ಣಿನ ಘನತೆಯನ್ನು ಯಾವಾಗ ಗುರುತಿಸಿ ಅವಳ ಚಿಂತನೆಯನ್ನು ಗೌರವಿಸುತ್ತದೆಯೋ ಆಗ ಪರಿಶುದ್ಧ ಸಮಾಜದ ನಿರ್ಮಾಣ ಸಾಧ್ಯ ಎಂದು ಎರ್ಮಾಳು ಬಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜ್ಯೋತಿ ಚೇಳ್ಯಾರ್ ಹೇಳಿದರು.
ಆಳ್ವಾಸ್‌ನ ವಿಎಸ್ ಆಚಾರ್ಯ ಸಭಾಭವನದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಂತರಿಕ ನಿರ್ವಹಣಾ ಸಮಿತಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೌರವದ ಬದುಕನ್ನು ನಡೆಸಿ
ಹೆಣ್ಣನ್ನು ಕೀಳಾಗಿ ಕಾಣುತ್ತಿರುವ ಸಮಾಜದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ತಾವು ಅರಿಯಬೇಕಾಗಿದೆ. ಸ್ವಾಭಿಮಾನದಿಂದ ಆತ್ಮ ಗೌರವದ ಬದುಕು ಕಟ್ಟಿಕೊಳ್ಳಬೇಕಾಗಿದೆ. ಹೆಣ್ಣು ತನ್ನ ಬಗ್ಗೆ ಎಂದಿಗೂ ಕೀಳರಿಮೆಯನ್ನು ಭಾವಿಸದೆ ತಮ್ಮತನದ ಬಗೆಗೆ ಗೌರವವನ್ನು ಬೆಳೆಸಿಕೊಂಡು ಮುನ್ನುಗ್ಗಬೇಕು. ಸಾಧನೆಯ ಹಾದಿಯು ಸಂಕಷ್ಟಗಳ ಸರಪಳಿಯಾಗಿದ್ದರೂ ಹರಿಯುವ ನೀರಿನ ಹಾಗೆ ಸಾಗುತ್ತಾ ಗುರಿ ಮುಟ್ಟಬೇಕು. ಹೆಣ್ಣಿನ ಹಾದಿಗೆ ಅಡ್ಡವಾಗಿ ಅನೇಕ ಅಡ್ಡಿ ಆತಂಕಗಳು ಬಂದರೂ ಭಯಪಡಬಾರದು. ಹೆಣ್ಣು ಸಾಮಾಜಿಕವಾಗಿ ಗೌರವದಿಂದ ಬದುಕುವ ಹಕ್ಕನ್ನು ಪಡೆದುಕೊಂಡಿರುತ್ತಾಳೆ ಎಂದರು.
ಸಮಾಜದಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಉತ್ತಮ ಸಂಸ್ಕೃತಿಯ ಆಳವಡಿಕೆ ಮುಖ್ಯ
ಅಧ್ಯಕ್ಷತೆವಹಿಸಿದ್ದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹಮ್ಮದ್ ಸದಾಕತ್ ಮಾತನಾಡಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಎಷ್ಟು ಕಲಿತಿದ್ದೇವೆ ಎನ್ನುವುದಕ್ಕಿಂತ ಕಲಿತ ಶಿಕ್ಷಣದಿಂದ ಎಷ್ಟರ ಮಟ್ಟಿಗೆ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದೇವೆ ಎಂಬುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನ್ಸಿ ಪಿ.ಎನ್, ಸಂಯೋಜಕಿ ವಿದ್ಯಾ ಕೆ, ಆಂಗ್ಲಭಾಷಾ ಉಪನ್ಯಾಸಕಿ ಹೇಮಾವತಿ,ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಮಲ್ಲಿಕಾ ಎಂ ಆರ್ ನಿರೂಪಿಸಿ, ಸಂಯೋಜಕಿ ಡಾ ಸುಲತಾ ಸ್ವಾಗತಿಸಿದರು.